ADVERTISEMENT

ತುಮಕೂರು | ಹೋರಾಟಕ್ಕೆ ಕಾಂಗ್ರೆಸ್‌ ಶಾಸಕರು ಕೈಜೋಡಿಸಲಿ: ಶಾಸಕ ಎಂ.ಟಿ. ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:08 IST
Last Updated 17 ಸೆಪ್ಟೆಂಬರ್ 2025, 5:08 IST
<div class="paragraphs"><p>ಗುಬ್ಬಿಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸಭೆ ನಡೆಸಿದರು.</p></div>

ಗುಬ್ಬಿಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸಭೆ ನಡೆಸಿದರು.

   

ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟಗಾರರು ಪಟ್ಟಣದಲ್ಲಿ ಮಂಗಳವಾರ ಸಭೆ ಸೇರಿ ಚರ್ಚಿಸಿದರು. ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಲಿಂಕ್‌ ಕೆನಾಲ್‌ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ, ಪ್ರಾರಂಭಿಸುತ್ತೇವೆ’ ಎಂದು ಹೇಳುವ ಮೂಲಕ ಜಿಲ್ಲೆಯ ಜನರ ತಾಳ್ಮೆಗೆ ಕಿಚ್ಚು ಹಚ್ಚಿದ್ದಾರೆ. ಗೌರವಯುತವಾಗಿ ರೈತರ ಭಾವನೆಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸಲು ಮುಂದಾಗಿರುವುದು ದುರಾದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಹೆದರಬಹುದು ಹೊರತು ಬೇರೆಯವರಲ್ಲ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಜಿಲ್ಲೆ ಪರವಾಗಿ ನಿಲ್ಲಬೇಕಿದೆ. ಕಾಂಗ್ರೆಸ್ ಶಾಸಕರಿಗೆ ಪಕ್ಷದಿಂದ ಹೊರ ಹಾಕುವ ಭೀತಿ ಇದ್ದಲ್ಲಿ ಜೆಡಿಎಸ್ ಸೇರಲಿ. ಶಾಸಕರಾಗಿ ಆಯ್ಕೆಯಾಗಲು ನಾವು ಸಹಕರಿಸುತ್ತೇವೆ. ಜಿಲ್ಲೆಯ ರೈತರ ಪರವಾಗಿ ಇದ್ದುಕೊಂಡು ಹೋರಾಟಕ್ಕೆ ಕೈಜೋಡಿಸಲಿ’ ಎಂದರು.

ADVERTISEMENT

ಎಸ್‌.ಡಿ. ದಿಲೀಪ್ ಕುಮಾರ್ ಮಾತನಾಡಿ, ಕಾಮಗಾರಿ ನಿಲ್ಲಿಸಿ ಜಿಲ್ಲೆಗೆ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಡಿ.ಕೆ. ಶಿವಕುಮಾರ್ ಮರಣ ಶಾಸನ ಬರೆಯಲು ಮುಂದಾಗಿರುವುದು ದುರಾದೃಷ್ಟಕರ. ಜನ ಬೆಂಬಲದ ಹೋರಾಟದ ಜೊತೆಗೆ ಕಾನೂನು ಹೋರಾಟ ನಡೆಸಲು ಮುಂದಾಗಿದ್ದೇವೆ. ಈಗಾಗಲೇ ಹೈಕೋರ್ಟ್‌ಗೆ ಕೇವಿಯಟ್‌ ಸಲ್ಲಿಸಲಾಗಿದ್ದು, ಶೀಘ್ರ ಕಾನೂನು ಸಮರಕ್ಕೂ ಮುಂದಾಗುತ್ತೇವೆ ಎಂದು ಹೇಳಿದರು.

ಬಿ.ಎಸ್. ನಾಗರಾಜು ಮಾತನಾಡಿ, ಶಾಸಕ ಎಸ್.ಆರ್. ಶ್ರೀನಿವಾಸ್ ಡಿಕೆಶಿ ಪಕ್ಕದಲ್ಲಿ ತುಟಿ ಬಿಚ್ಚದೆ ಕುಳಿತುಕೊಳ್ಳುವ ಮೂಲಕ ತಾಲ್ಲೂಕಿನ ಜನರಿಗೆ ಅಪಮಾನಿಸಿರುವುದು ಖಂಡನೀಯ. ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ. ಎಲ್ಲ ರೈತರಿಗೂ ಅನ್ಯಾಯವಾಗುತ್ತಿರುವುದರಿಂದ ಜಿಲ್ಲೆಯ ಜನರ ಪರವಾಗಿದ್ದುಕೊಂಡು ನಿರಂತರ ಹೋರಾಟ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಕಳ್ಳಿಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ ಮಾತನಾಡಿದರು.

ಚಂದ್ರಶೇಖರ ಬಾಬು, ಎಚ್‌.ಟಿ. ಭೈರಪ್ಪ, ಬ್ಯಾಟರಂಗೆಗೌಡ, ನಂಜೇಗೌಡ, ಶಂಕರ್ ಕುಮಾರ್, ಪಂಚಾಕ್ಷರಿ, ಅಣ್ಣಪ್ಪ, ಕೃಷ್ಣಮೂರ್ತಿ, ಬಲರಾಮಯ್ಯ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ರೈತ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು, ಹೊರಟಗಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.