
ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಈ ಬಾರಿ ಯುವಕರಿಗೆ ಆದ್ಯತೆ ನೀಡಿರುವುದು ವಿಶೇಷ.
ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ, 39 ವರ್ಷದ ಶಶಿಹುಲಿಕುಂಟೆ ಮಠ್ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷದ ಹೈಕಮಾಂಡ್ ಘೋಷಿಸಿದೆ. ಯುವಕರಿಗೆ ಅವಕಾಶ, ಆದ್ಯತೆ ಸಿಗುತ್ತಿಲ್ಲ ಎಂಬ ಅಸಮಾಧಾನದ ನಡುವೆ ಯುವ ಕಾರ್ಯಕರ್ತರನ್ನು ಪಕ್ಷ ಗುರುತಿಸಿ, ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ.
ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಪ್ರಸ್ತುತ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ನಾಯಕರಾಗಿ ಪಕ್ಷ ಸಂಘಟನೆ, ಹೋರಾಟ, ನಾಯಕತ್ವ ಗುಣವನ್ನು ಪರಿಗಣಿಸಿ ಟಿಕೆಟ್ ನೀಡಲಾಗಿದೆ. ‘ಯುವ ಪಡೆ’ ನಿರ್ಮಾಣಕ್ಕೆ ಮುಂದಾಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲೂ ಯುವಕರಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಗ್ನೇಯ ಪದವೀಧರ ಕ್ಷೇತ್ರದ ಪ್ರಸ್ತುತ ಅವಧಿ 2026ರ ನವೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಈಗ ಬಿಜೆಪಿಯ ಚಿದಾನಂದ ಎಂ.ಗೌಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್‌ನಿಂದ ರಮೇಶ್ ಬಾಬು, ಬಂಡಾಯವಾಗಿ ಡಿ.ಟಿ.ಶ್ರೀನಿವಾಸ್ (ಈಗ ಕಾಂಗ್ರೆಸ್ ವಿಧಾನ ಪರಿಷತ್ತು ಸದಸ್ಯ), ಹಾಲೇನೂರು ಲೇಪಾಕ್ಷ್ ಸ್ಪರ್ಧಿಸಿದ್ದರು. ಚಿದಾನಂದಗೌಡ ಆಯ್ಕೆ ಆಗಿದ್ದರು.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ (ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕು ಮಾತ್ರ) ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಈ ಕ್ಷೇತ್ರದ ವ್ಯಾಪ್ತಿಗೆ 34 ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಅದರಲ್ಲಿ ಕಾಂಗ್ರೆಸ್‌ನ 26, ಬಿಜೆಪಿಯ 4 ಹಾಗೂ ಜೆಡಿಎಸ್‌ನ 4 ಶಾಸಕರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.