ADVERTISEMENT

‘ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:24 IST
Last Updated 5 ಸೆಪ್ಟೆಂಬರ್ 2019, 19:24 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ತುಮಕೂರು: ‘ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಸ್ಥಿರತೆ ಇದೆ. ಯಾವಾಗ ಬೇಕಾದರೂ ಸರ್ಕಾರ ಬಿದ್ದು ಹೋಗಬಹುದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸನ್ನದ್ಧವಾಗುತ್ತಿದೆ. ವಾರ್ಡ್, ಬ್ಲಾಕ್‌ವಾರು ಪಕ್ಷವನ್ನು ಸಂಘಟಿಸಲು ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೆ ಅತೃಪ್ತಿ ಇದೆ. ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಯಡಿಯೂರಪ್ಪ ಕೇಳಿದರೂ ಮನವಿಗೆ ಕೇಂದ್ರ ಸರ್ಕಾರ ಮತ್ತು ಅವರ ಪಕ್ಷದ ಕೇಂದ್ರ ನಾಯಕರು ಸ್ಪಂದಿಸಿಲ್ಲ’ ಎಂದು ದೂರಿದರು.

ADVERTISEMENT

‘ಮುಂದಿನ ವರ್ಷ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅವುಗಳ ಜತೆಯೇ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಉದ್ದೇಶ ಬಿಜೆಪಿ ಕೇಂದ್ರ ನಾಯಕರಿಗೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಬಹಳ ದಿನ ಇರುವುದಿಲ್ಲ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸೆ.7 ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕೆಪಿಸಿಸಿ ನಿಯೋಗವು ಅವರನ್ನು ಭೇಟಿ ಮಾಡಿ ನೆರೆ ಪರಿಹಾರಕ್ಕೆ ಮನವಿ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.