ADVERTISEMENT

ಬಿಜೆಪಿ ಭೂಮಿ ಪಡೆದಿಲ್ಲವೆ: ಕಾಂಗ್ರೆಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:55 IST
Last Updated 23 ಆಗಸ್ಟ್ 2025, 6:55 IST
ಜಿ.ಚಂದ್ರಶೇಖರ್‌ಗೌಡ
ಜಿ.ಚಂದ್ರಶೇಖರ್‌ಗೌಡ   

ತುಮಕೂರು: ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆ, ಸಂಘಟನೆಗಳು ಸರ್ಕಾರದಿಂದ ಎಲ್ಲೂ ಭೂಮಿ ಪಡೆದುಕೊಂಡಿಲ್ಲವೆ? ಆರ್‌ಎಸ್‌ಎಸ್‌ನ ‘ಸಾಧನ’ ಭವನ, ಎಬಿವಿಪಿ ಭವನಗಳಲ್ಲಿ ಯಾವ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಇಲ್ಲಿ ಶುಕ್ರವಾರ ಪ್ರಶ್ನಿಸಿದರು.

‘ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಬಿಜೆಪಿಯವರ ವರ್ತನೆಯನ್ನು ಖಂಡಿಸಿದರು.

ಬಿಜೆಪಿಯವರು ಯಾವ ಭಾಗದಲ್ಲಿ ಎಷ್ಟು ಭೂಮಿ ಪಡೆದುಕೊಂಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ಆದರೆ ಅವರ ಕಾರ್ಯಕ್ಕೆ ಅಡ್ಡಿಪಡಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ನಮ್ಮ ಕೆಲಸಕ್ಕೂ ಅಡ್ಡಿ ಬರಬಾರದು ಎಂದರು.

ADVERTISEMENT

ಕಾಂಗ್ರೆಸ್ ಭವನಕ್ಕೆ ಮಂಜೂರಾಗಿರುವ ಮರಳೂರಿನ ಜಾಗವನ್ನು 1904ರಲ್ಲಿ ಅಂದಿನ ಮೈಸೂರು ಮಹಾರಾಜರು ಕಸ ವಿಲೇವಾರಿಗೆ ದಾನವಾಗಿ ನೀಡಿದ್ದರು. ಅಂದಿನಿಂದಲೂ ಈ ಜಾಗ ಮಹಾನಗರ ಪಾಲಿಕೆಯ ಸ್ವತ್ತಾಗಿಯೇ ಉಳಿದಿದೆ. ಇದಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು, ಭೂಮಿಯ ಒಟ್ಟಾರೆ ಮೌಲ್ಯದ ಶೇ 5ರಷ್ಟು ಹಣವನ್ನು ಕಟ್ಟಿಸಿಕೊಂಡೇ ಭೂಮಿ ನೋಂದಣಿ ಮಾಡಿಕೊಡಲು ಆದೇಶಿಸಲಾಗಿದೆ. ಎಲ್ಲಿಯೂ ಕಾನೂನು ಗಾಳಿಗೆ ತೂರಿಲ್ಲ. ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷದ ಭವನ ನಿರ್ಮಾಣಕ್ಕೆ ಜಮೀನು ಬೇಕಾದರೆ ಅರ್ಜಿ ಹಾಕಿ ಪಡೆದುಕೊಳ್ಳಲಿ. ಅದು ಬಿಟ್ಟು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ಮಂಜೂರಾದ ಭೂಮಿಯನ್ನು ನೋಂದಣಿ ಮಾಡಿಸುವ ಸಮಯದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಜೆಪಿಯವರು ಗೂಂಡಾಗಳಂತೆ ವರ್ತಿಸಿದ್ದಾರೆ. ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸರ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಆರ್.ರಾಮಕೃಷ್ಣ, ‘ಕಾನೂನು ಪ್ರಕಾರವೇ ಜಾಗ ಪಡೆದುಕೊಂಡಿದ್ದು, ಈಗ ಮಂಜೂರಾಗಿರುವ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲಾಗುವುದು. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಸವಾಲು ಹಾಕಿದರು.

ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ‘ಬಿಜೆಪಿಯವರು ಸಂಘರ್ಷ ಮಾಡಿದರೆ ನಾವು ಸಂಯಮದಿಂದ ಕೆಲಸ ಮಾಡುತ್ತಿದ್ದೇವೆ. ಎಲ್ಲದಕ್ಕೂ ಅವರ ಒಪ್ಪಿಗೆ ಪಡೆಯಬೇಕೆ’ ಎಂದು ಪ್ರಶ್ನಿಸಿದರು.

ಮುಖಂಡರಾದ ಇಕ್ಬಾಲ್ ಅಹಮದ್, ವಾಲೆಚಂದ್ರು, ಪಂಚಾಕ್ಷರಯ್ಯ, ಅಸ್ಲಾಂಪಾಷ, ರೇವಣ್ಣಸಿದ್ದಯ್ಯ, ಮಹೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.