
ತುಮಕೂರು: ನಗರದ ಹೊರ ವಲಯದ ಪಂಡಿತನಹಳ್ಳಿ, ಹೆಗ್ಗೆರೆಯಲ್ಲಿ ರೈಲ್ವೆ ಗೇಟ್ ಬಳಿ ಮೇಲು ಸೇತುವೆ ನಿರ್ಮಾಣ ಹಾಗೂ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗಿ ಮಹಿಳೆಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
₹20 ಕೋಟಿ ವೆಚ್ಚದಲ್ಲಿ ಆರು ಅಂತಸ್ತಿನ 480 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 2027ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಟ್ಟಡ ಕೆಲಸ ಪೂರ್ಣಗೊಂಡರೆ ಕೈಗಾರಿಕಾ ಪ್ರದೇಶದ ಮಹಿಳಾ ಉದ್ಯೋಗಿಗಳಿಗೆ ಸಹಕಾರಿಯಾಗಲಿದೆ.
ವಸತಿ ನಿಲಯ ನಿರ್ಮಾಣಕ್ಕೆ ಚಾಲನೆ ನೀಡಿದ ನಂತರ ಸೋಮಣ್ಣ ಮಾತನಾಡಿ, ‘ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಉದ್ಯೋಗಿ ಮಹಿಳೆಯರ ವಸತಿ ನಿಲಯ ನಿರ್ಮಾಣಕ್ಕೆ ಶೀಘ್ರವೇ ₹40 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.
ಶಾಸಕ ಬಿ.ಸುರೇಶ್‍ಗೌಡ, ‘ವಸಂತನರಸಾಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ 13 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಬಿಜೆಪಿ ಮುಖಂಡರಾದ ಎಚ್.ಎಸ್.ರವಿಶಂಕರ್, ವೈ.ಎಚ್.ಹುಚ್ಚಯ್ಯ, ವಸಂತನರಸಾಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್ ಇತರರು ಉಪಸ್ಥಿತರಿದ್ದರು.
ಜಿಎಸ್‍ಟಿ ಹಣ ಕೊಡಿ: ಪರಮೇಶ್ವರ
ತುಮಕೂರು: ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸದೆ ರಾಜ್ಯಕ್ಕೆ ಜಿಎಸ್‌ಟಿ ಪಾಲಿನ ಹಣವನ್ನು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಒತ್ತಾಯಿಸಿದರು. ಹೆಗ್ಗೆರೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ‘ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ₹4.5 ಲಕ್ಷ ಕೋಟಿ ಜಿಎಸ್‍ಟಿ ಸಂಗ್ರಹಿಸಿ ನೀಡಲಾಗುತ್ತಿದೆ.
ದೇಶದಲ್ಲಿ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುವ ಎರಡನೇ ರಾಜ್ಯವಾಗಿದೆ. ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಡಬೇಕಾದ ಜಿಎಸ್‍ಟಿ ಹಣ ಕೊಡುತ್ತಿಲ್ಲ. ಕೇವಲ ₹50 ಸಾವಿರ ಕೋಟಿ ನೀಡುತ್ತಿದೆ. ನಮಗೆ ಬರಬೇಕಾದ ಪಾಲಿನ ಹಣ ಪಡೆದುಕೊಳ್ಳಲು ಹೋರಾಟ ಮಾಡಬೇಕಿದೆ. ಇದಕ್ಕೆ ಪಕ್ಷಾತೀತವಾಗಿ ಪ್ರಯತ್ನ ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.