ADVERTISEMENT

ಕ್ವಿಂಟಲ್‌ಗೆ ₹30 ಸಾವಿರ ದಾಟಿದ ಕೊಬ್ಬರಿ ಬೆಲೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:45 IST
Last Updated 30 ಜನವರಿ 2026, 5:45 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಉಂಡೆ ಕೊಬ್ಬರಿ ಧಾರಣೆ ಏರಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ ₹31,026ಕ್ಕೆ ಮಾರಾಟವಾಗಿದೆ.

ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕೊಬ್ಬರಿ ಕನಿಷ್ಠ ₹28,500, ಮಾದರಿ ₹30,060ಕ್ಕೆ ಮಾರಾಟವಾಗಿದೆ. ಒಟ್ಟು 3,572 ಕ್ವಿಂಟಲ್ ಆವಕವಾಗಿತ್ತು.

ಹೊಸ ವರ್ಷದ ಆರಂಭದಲ್ಲೇ ಮತ್ತೊಮ್ಮೆ ಕ್ವಿಂಟಲ್ ಕೊಬ್ಬರಿ ದರ ₹30 ಸಾವಿರ ದಾಟಿರುವುದು ತೆಂಗು ಬೆಳೆಗಾರರ ಮುಖದಲ್ಲಿ ಹರ್ಷ ಮೂಡಿಸಿದೆ.

ADVERTISEMENT

ಹಿಂದಿನ ವರ್ಷದ ಜೂನ್ ತಿಂಗಳಲ್ಲಿ ಕ್ವಿಂಟಲ್ ₹31,606ಕ್ಕೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ನಂತರದ ದಿನಗಳಲ್ಲಿ ನಿಧಾನವಾಗಿ ಇಳಿಕೆಯಾಗಿ ₹25 ಸಾವಿರಕ್ಕಿಂತ ಕಡಿಮೆಯಾಗಿತ್ತು. 

ಸಾಮಾನ್ಯವಾಗಿ ಜೂನ್ ಅಥವಾ ದೀಪಾವಳಿ ವೇಳೆಗೆ ಕೊಬ್ಬರಿ ಧಾರಣೆ ಹೆಚ್ಚಳವಾಗುತಿತ್ತು. ಆದರೆ, ಈ ವರ್ಷದ ಆರಂಭದಲ್ಲೇ ಏರಿಕೆಯಾಗಿದ್ದು ಬೇಸಿಗೆ ಹೊತ್ತಿಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೊಬ್ಬರಿ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ.  ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯುವ ಕೇರಳ, ತಮಿಳುನಾಡು ರಾಜ್ಯದಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಜತೆಗೆ ತೆಂಗಿನ ಕಾಯಿಯನ್ನು ಕೊಬ್ಬರಿ ಮಾಡುವ ಬದಲು ಸಾಕಷ್ಟು ಪ್ರಮಾಣದಲ್ಲಿ ಕಾಯಿ ಪೌಡರ್(ಡೆಸಿಕೇಟೆಡ್‌ ಪೌಡರ್) ಉತ್ಪಾದನೆಗೆ ಬಳಸಲಾಗುತ್ತಿದೆ. ಇದರಿಂದಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಉತ್ತರ ಭಾರತದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದ್ದು ಕೊಬ್ಬರಿ ಸೇವನೆ ಹಾಗೂ ಆಹಾರದಲ್ಲಿ ಕೊಬ್ಬರಿ ಬಳಕೆ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ಏಕಾಏಕಿ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಂಡಿ ವರ್ತಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.