ADVERTISEMENT

ತುಮಕೂರು: ಮುಂದುವರಿಯುತ್ತಿದೆ ಸಾಯುವವರ ಸಂಖ್ಯೆ

ಜಿಲ್ಲೆಯಲ್ಲಿ 319ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 13:26 IST
Last Updated 8 ಜುಲೈ 2020, 13:26 IST
   

ತುಮಕೂರು: ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನವೂ ಕೊರೊನಾ ಸೋಂಕಿತರು ಮೃತಪಡುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಬುಧವಾರವೂ ಇದು ಮುಂದುವರೆದಿದೆ. ಸಹಜವಾಗಿ ಇದು ಸೋಂಕಿತ ವ್ಯಕ್ತಿಯ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕೋವಿಡ್–19 ತನ್ನ ಕಬಂದಬಾಹುವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿರುವುದರಿಂದ ಜಿಲ್ಲೆಯ ಜನರು ಸಹ ಆತಂಕಕ್ಕೆ ಒಳಗಾಗಿದ್ದಾರೆ. ಬುಧವಾರ ಒಂದೇ ದಿನ 27 ಮಂದಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಜನರ ಆತಂಕ ಹಿಮ್ಮಡಿಸಿದೆ.

ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಕನಿಷ್ಠ 10 ಮಂದಿಗಾದರೂ ಸೋಂಕು ತಗುಲುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 319ಕ್ಕೆ ಹಾಗೂ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕೊರಟಗೆರೆ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನಿಂದ ಮೊದಲ ಸಾವು ಪ್ರಕರಣ ದಾಖಲಾಗಿದೆ.

ADVERTISEMENT

ಬುಧವಾರ ದೃಢಪಟ್ಟ ಸೋಂಕಿತರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಒಂದರಲ್ಲೇ 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಸೋಂಕು ತಗುಲಿರುವುದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇದೇ ಮೊದಲು. ಉಳಿದಂತೆ ಮಧುಗಿರಿ ತಾಲ್ಲೂಕಿನಲ್ಲಿ–5, ತಿಪಟೂರು–3, ತುಮಕೂರು–2 ಹಾಗೂ ಕೊರಟಗೆರೆಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ತುಮಕೂರಿನಲ್ಲಿ ಇಬ್ಬರಿಗೆ ಸೋಂಕು: ತುಮಕೂರು ತಾಲ್ಲೂಕು ದೇವರಾಯಪಟ್ಟಣದ 37 ವರ್ಷದ ವ್ಯಕ್ತಿಗೆ ಹಾಗೂ ಹೆಗ್ಗೆರೆಯ 62 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಬ್ಬರ ಪ್ರಯಾಣ ಹಾಗೂ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

ಇತ್ತೀಚೆಗೆ ದಾಖಲಾಗುತ್ತಿರುವ ಸೋಂಕಿತರ ಪೈಕಿ ಬಹುತೇಕರ ಪ್ರಯಾಣದ ಮಾಹಿತಿ ಹಾಗೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ಮುಂದೆಯೂ ಸೋಂಕಿತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಬುಧವಾರ ದೃಢಪಟ್ಟ ಸೋಂಕಿತರಲ್ಲೂ ಬಹುತೇಕರ ಪ್ರಯಾಣ ಮತ್ತು ಸಂಪರ್ಕಿತರ ಮಾಹಿತಿ ತಿಳಿದು ಬಂದಿಲ್ಲ. ಇದು ಸಹಜವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಬಗ್ಗೆ ಪುಷ್ಠಿ ನೀಡಿದೆ.

ಐಸಿಯುನಲ್ಲಿ 7 ಮಂದಿ: ಜಿಲ್ಲೆಯಲ್ಲಿ ಕೆಲವು ಸೋಂಕಿತರ ಸ್ಥಿತಿಗತಿ ಗಂಭೀರವಾಗಿದೆ. ಪ್ರಸ್ತುತ 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಒಬ್ಬರು ಗುಣಮುಖರಾಗಿ ಮನೆಗೆ ಹಿಂದುರುಗಿದ್ದು, ಗುಣಮುಖರಾದವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಪ್ರಸ್ತುತ 240 ಮಂದಿಗೆ ಕೋವಿಡ್–19 ಸಕ್ರೀಯವಾಗಿದೆ. 1,395 ಮಂದಿ ನಿಗಾವಣೆಯಲ್ಲಿ ಇದ್ದಾರೆ. ಈವರೆಗೆ 22,284 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 18,272 ವರದಿಗಳು ನೆಗೆಟೀವ್ ಬಂದಿವೆ.

---------

ತಾಲ್ಲೂಕು;ಇಂದಿನ ಸೋಂಕಿತರು (ಜು.8);ಒಟ್ಟು ಸೋಂಕಿತರು;ಮರಣ
ಚಿ.ನಾ.ಹಳ್ಳಿ;16;10;0
ಗುಬ್ಬಿ;0;24;0
ಕೊರಟಗೆರೆ;1;24;1
ಕುಣಿಗಲ್;0;22;1
ಮಧುಗಿರಿ;5;30;0
ಪಾವಗಡ;0;31;0
ಶಿರಾ;0;27;1
ತಿಪಟೂರು;3;11;0
ತುಮಕೂರು;2;66;8
ತುರುವೇಕೆರೆ;0;7;0
ಒಟ್ಟು;27;319;11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.