ADVERTISEMENT

ಪ್ಲೇಗಮ್ಮ ರೀತಿ ‘ಕೊರೊನಾ ಮಾರಮ್ಮ’ನಿಗೆ ಪೂಜೆ: ಎಂಎಸ್‌ಡಬ್ಲ್ಯು ಪದವೀಧರ ಅರ್ಚಕ!

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 12:54 IST
Last Updated 31 ಮಾರ್ಚ್ 2020, 12:54 IST
   

ಚಿಕ್ಕನಾಯಕನಹಳ್ಳಿ: ಹಿಂದಿನ ಕಾಲದಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಿನಮ್ಮ ಎಂದು ಪೂಜಿಸಿದಂತೆ, ಕೊರೊನಾ ಎಂಬ ಮಹಾಮಾರಿ ನಿವಾರಣೆಯಾಗಲು ಕೊರೊನಾ ಮಾರಮ್ಮ ಎಂಬ ಪೂಜೆಯನ್ನು ಮಾಡಿರುವುದಾಗಿ ಪಟ್ಟಣದ ಮಹಾಲಕ್ಷ್ಮಿ ದೇವಾಲಯ ಅರ್ಚಕ ಲಕ್ಷೀಶ್ ತಿಳಿಸಿದ್ದಾರೆ.

ನಮ್ಮ ಪೂರ್ವಜರು ಪ್ಲೇಗಿನಮ್ಮನನ್ನು ಪೂಜಿಸಿದಂತೆ ನಮ್ಮ ಕಾಲಘಟ್ಟಕ್ಕೆ ಬಂದಿರುವ ಈ ಕೊರೊನಾವನ್ನು ಓಡಿಸಲು ಕೊರೊನಾ ಮಾರಮ್ಮನನ್ನು ಪೂಜಿಸುತ್ತಿದ್ದೇವೆ. ಬೇವಿನ ಸೊಪ್ಪಿನ ಅಲಂಕಾರದಿಂದ ಮಾಡಿರುವ ಈ ಮಾರಮ್ಮನನ್ನು ಪಟ್ಟಣದ ಹೊಸಬೀದಿಯಲ್ಲಿರುವ ಮಹಾಲಕ್ಷ್ಮಿ ಮತ್ತು ಮದ್ದರಲಕ್ಕಮ್ಮನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕೊರೊನಾ ಮಾರಮ್ಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲವೆಂದು ತಿಳಿಸಿರುವ ಅವರು, ‘ಇದನ್ನು ಮೂಢನಂಬಿಕೆ ಎನ್ನುವವರಿಗೆ ನಾವೇಳುವುದು ಇಷ್ಟೇ; ಮೂಢ ಅಲ್ಲ, ಮೂಲ ನಂಬಿಕೆ’ ಎಂದು ತಿಳಿಸಿದ್ದಾರೆ.

ಈ ರೀತಿಯ ಕೊರೊನಾ ಮಾರಮ್ಮನ ಪೂಜೆಗೆ ಮುಂದಾಗಿರುವ ಅರ್ಚಕ ಲಕ್ಷ್ಮೀಶ್ ಎಂಎಸ್‌ಡಬ್ಲ್ಯು ಪದವೀಧರ. ಕೆಲ ಕಾಲ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಹಾಸನ ಜಿಲ್ಲೆಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಸಮುದಾಯದ ಆರೋಗ್ಯದ ಬಗ್ಗೆ ಪಾಠ ಹೇಳಿಕೊಟ್ಟವರು. ಅವರೇ ಈ ರೀತಿಯ ‘ಮೂಢ’ಕ್ಕೆ ‘ಮೂಲ’ವೆಂಬ ತೇಪೆ ಹಾಕಿ ಜನರನ್ನು ಮರಳು ಮಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.