ADVERTISEMENT

ಕೊರೊನಾ ವಾರಿಯರ್ | ಆತ್ಮವಿಶ್ವಾಸ, ದಕ್ಷತೆ ಹೆಚ್ಚಾಗಿದೆ: ವೈದ್ಯೆ ಎಂ.ಅನಸೂಯ

ತುಮಕೂರು ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ವೈದ್ಯರಾಗಿರುವ ಎಂ. ಅನಸೂಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 11:05 IST
Last Updated 17 ಜುಲೈ 2020, 11:05 IST
ಅನಸೂಯ
ಅನಸೂಯ   

ತುಮಕೂರು: ಕೊರೊನಾ ಸೋಂಕು ವೈದ್ಯಕೀಯ ಕ್ಷೇತ್ರದ ದಕ್ಷತೆ ಹೆಚ್ಚಿಸಿದೆ. ಎಂತಹ ಸಾಂಕ್ರಾಮಿಕ ರೋಗಗಳನ್ನೂ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬ ವಿಶ್ವಾಸ ಮೂಡಿಸಿದೆ.

ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ವೈದ್ಯರಾಗಿರುವಎಂ. ಅನಸೂಯ ಅವರ ಅಭಿಪ್ರಾಯವಿದು.

ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೊರೊನಾ ರೋಗಿಗೆ ಯಾವುದೇ ವೈಯಕ್ತಿಕ ಸುರಕ್ಷತಾ ಕವಚ ಧರಿಸದೆ ಚಿಕಿತ್ಸೆ ನೀಡಿದ್ದೆವು. ನಂತರ ಅವರಿಗೆ ಸೋಂಕು ದೃಢವಾದಾಗ ಭಯವಾಗಿತ್ತು. ಆದರೆ ಈಗ ಆ ಮಟ್ಟಿನ ಭಯ ಇಲ್ಲವಾಗಿದೆ. ಸಾಮಾನ್ಯ ರೋಗಿಗಳಂತೆ ಇವರನ್ನು ಉಪಚರಿಸುತ್ತೇವೆ ಎಂದು ಅವರು ಹೇಳಿದರು.

ADVERTISEMENT

ನಮ್ಮನ್ನು ನಾವು ರಕ್ಷಿಸಿಕೊಂಡು, ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕಿರುವುದೇ ಸವಾಲು. ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ವಯಸ್ಸಾದ ಅತ್ತೆ ಇದ್ದಾರೆ. ನನ್ನ ಗಂಡ ಸಹ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು. ಹಾಗಾಗಿ ಮಕ್ಕಳು ಮತ್ತು ಅತ್ತೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದೇವೆ. ಮೂರೂವರೆ ತಿಂಗಳಿನಿಂದ ಮಕ್ಕಳು ದೂರವಿದ್ದಾರೆ ಎಂದರು.

ಜಗತ್ತಿನಾದ್ಯಂತ ವ್ಯಾಪಿಸಿರುವ ಈ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರುವಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಕೋವಿಡ್ ದೃಢವಾದ ತಕ್ಷಣವೇ ರೋಗಿಯ ಎದೆಬಡಿತ ಹೆಚ್ಚಿರುತ್ತದೆ. ಮಾನಸಿಕವಾಗಿ ತೀವ್ರ ಆಘಾತಗೊಂಡಿರುತ್ತಾರೆ. ಆದರೆ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳುವಾಗ ಬಹಳ ಖುಷಿಯಿಂದ ಹೋಗುತ್ತಾರೆ. ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಬಗ್ಗೆ ಅವರಲ್ಲಿ ವ್ಯಕ್ತಪಡಿಸಲಾಗದ ಕೃತಜ್ಞತೆ ಭಾವ ಇರತ್ತದೆ ಅದನ್ನು ನೋಡಿದಾಗ ನಾವು ಪಿಪಿಇ ಕಿಟ್‌ ಧರಿಸುವುದು, ರಜೆ ಇಲ್ಲದೆ ಕರ್ತವ್ಯ ನಿರ್ವಹಿಸಿದ್ದು ಸಾರ್ಥಕವೆನಿಸುತ್ತದೆ ಎನ್ನುವುದು ಅವರ ನುಡಿ.

ವೃದ್ಧರೊಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಜತೆಗೆ ಬೇರೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯೂ ಇತ್ತು. ಅವರು ಬದುಕುವ ಸಾಧ್ಯತೆ ಕಡಿಮೆ ಎಂದೇ ಅನಿಸಿತ್ತು. ಆದರೆ ಅವರು ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸಿದರು. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖರಾದರು. ಆಸ್ಪತ್ರೆಯಿಂದ ತೆರಳುವಾಗ ಅವರ ಮಗ ಬಂದು ‘ತಂದೆಯನ್ನು ಜೀವಂತವಾಗಿ ಮನೆಗೆ ಕರೆದೊಯ್ಯುವ ಭರವಸೆಯೇ ಇರಲಿಲ್ಲ’ ಎನ್ನುತ್ತಾ ಕಾಲಿಗೆ ಬೀಳಲು ಬಂದರು ಇದು ವೃತ್ತಿ ಬದುಕಿನ ಸ್ಮರಣೀಯ ಕ್ಷಣಗಳಲ್ಲಿ ಒಂದು ಎನಿಸಿತು ಅನಸೂಯ ಅಭಿಪ್ರಾಯ ಹಂಚಿಕೊಂಡರು.

ಪ್ರಾರಂಭದಲ್ಲಿ ರೋಗಿಗಳ ಕಡೆಯವರು ಸೋಂಕಿತರು ಇರುವ ವಾರ್ಡ್‌ಗೆ ಹೋಗಲು, ಅವರನ್ನು ಮಾತನಾಡಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಅವರಿಗೂ ದೈರ್ಯ ಬಂದಿದೆ. ಇತರ ರೋಗಗಳಂತೆ ಇದು ಸಾಮಾನ್ಯ ಸೋಂಕು ಎಂಬುದನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.