ADVERTISEMENT

ತುಮಕೂರು | ಮತ್ತೆ 9 ಮಂದಿಗೆ ಕೋವಿಡ್‌ ಸೋಂಕು

ಮೂರೇ ದಿನದಲ್ಲಿ 14 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಮೇ 2020, 16:45 IST
Last Updated 22 ಮೇ 2020, 16:45 IST
ಡಾ.ಕೆ.ರಾಕೇಶ್‍ಕುಮಾರ್
ಡಾ.ಕೆ.ರಾಕೇಶ್‍ಕುಮಾರ್   

ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿನ 9 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 25ಕ್ಕೇರಿದೆ. ಕಳೆದ ಮೂರು ದಿನಗಳಲ್ಲಿಯೇ 14 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಕೊರೊನಾ ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದಿಂದ ಬಂದವರೇ ಇವರಲ್ಲಿ ಹೆಚ್ಚಿದ್ದಾರೆ.

ಮಹಾರಾಷ್ಟ್ರದಿಂದ ತುರುವೇಕೆರೆಗೆ ಬಂದಿದ್ದ 39 ವರ್ಷ, 21 ವರ್ಷ, 10 ವರ್ಷದ ಗಂಡು ಹಾಗೂ 29 ವರ್ಷದ ಹೆಣ್ಣು ಮಗಳನ್ನು ತುರುವೇಕೆರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 8 ವರ್ಷದ ಗಂಡು ಮಗು ಹಾಗೂ 60 ವರ್ಷದ ವ್ಯಕ್ತಿ ಮಹಾರಾಷ್ಟ್ರದಿಂದ ತುಮಕೂರಿಗೆ ಬಂದಿದ್ದರು. ಇವರನ್ನು ತುಮಕೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿಯೂ ಸೋಂಕು ಪತ್ತೆಯಾಗಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತುಮಕೂರಿನ ಸದಾಶಿವ ನಗರದ 24 ವರ್ಷದ ಗರ್ಭಿಣಿಗೂ ಸೋಂಕು ತಗುಲಿದೆ. ಗರ್ಭಿಣಿಯಾದ ಕಾರಣ ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಅವರಿಗೆ ಹೆರಿಗೆ ಆಗಿದೆ.

ADVERTISEMENT

ಉಸಿರಾಟದ ಸಮಸ್ಯೆಯಿಂದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದ ಹೆಬ್ಬೂರು ಸಮೀಪದ ಮಾಯಮ್ಮನ ಪಾಳ್ಯದ 66 ವರ್ಷದ ವ್ಯಕ್ತಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ನೆಲಮಂಗಲ ತಾಲ್ಲೂಕಿನ ದಾಬಸ್‌ ಪೇಟೆಯ 55 ವರ್ಷದ ಮಹಿಳೆಯೂ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ತಗುಲಿದ ಎಲ್ಲರಿಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 9 ಸಕ್ರಿಯ ಪ್ರಕರಣಗಳು ಇದ್ದು ಈಗ 18ಕ್ಕೇರಿದೆ.

‘ಮಹಾ’ ಭಯ: ಮಹಾರಾಷ್ಟ್ರದಿಂದ ಬಂದಿದ್ದ ನಾಲ್ಕು ಮಂದಿಯಲ್ಲಿ ಬುಧವಾರ, ಒಬ್ಬರಲ್ಲಿ ಗುರುವಾರ ಸೋಂಕು ಪತ್ತೆಯಾಗಿತ್ತು. ಈಗ ಮತ್ತೆ ಅಲ್ಲಿಂದ ಬಂದ 6 ಜನರಲ್ಲಿ ಸೋಂಕು ಕಂಡು ಬಂದಿದೆ. ಮಹಾರಾಷ್ಟ್ರದಿಂದ ಬಂದವರ ಬಗ್ಗೆ ಜಿಲ್ಲೆಯಲ್ಲಿ ಭಯ ಹೆಚ್ಚುತ್ತಿದೆ. ಇತ್ತೀಚೆಗೆ ಕಣ್ತಪ್ಪಿಸಿ ಚಿಕ್ಕನಾಯಕಹಳ್ಳಿ ತಾಲ್ಲೂಕು ಕುದುರೆ ಕಣಿವೆಗೆ ಮಹಾರಾಷ್ಟ್ರದಿಂದ ಬಂದಿದ್ದ ಒಬ್ಬರು ಹಾಗೂ ಇವರಿಗೆ ಸಹಕರಿಸಿದ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ಸಹ ದಾಖಲಿಸಿದ್ದಾರೆ.

ಈ ಮುನ್ನ ಶಿರಾ ಮತ್ತು ತುಮಕೂರಿನಲ್ಲಿ ಮಾತ್ರ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಸೋಂಕು ದೃಢವಾದ ನಂತರ ಪಾವಗಡದಲ್ಲಿ ಕ್ವಾರಂಟೈನ್‌ನಲ್ಲಿದ್ದ ತಬ್ಲೀಗ್ ಸದಸ್ಯರನ್ನೂ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈಗ ತುರುವೇಕೆರೆ, ಕೊರಟಗೆರೆ, ಹೆಬ್ಬೂರು ಹೀಗೆ ವಿವಿಧ ಕಡೆಗಳಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ಸೋಂಕನ್ನು ಮತ್ತಷ್ಟು ಹರಡುತ್ತದೆಯೇ ಎನ್ನುವ ಭಯ ಮೂಡಿಸಿದೆ.

ನೆರೆಯ ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವ ರಿಂದ ಸೋಂಕಿನ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮಹಾ ರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದ ಬಂದವರ ಬಗ್ಗೆ ಜನರಲ್ಲಿ ತೀವ್ರ ಭಯ ಆವರಿಸುತ್ತಿದೆ.

ಕಂಟೈನ್‌ಮೆಂಟ್ ವಲಯ
ಮಾಯಮ್ಮನಪಾಳ್ಯ ಮತ್ತು ಸದಾಶಿವನಗರವನ್ನು ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ನಾಗರಿಕರು ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬನ್ನಿ. ಹೊರಗೆ ಓಡಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೊರರಾಜ್ಯಗಳಿಂದ ಯಾರಾದರೂ ಜಿಲ್ಲೆಗೆ ಬಂದಿದ್ದವರು ಕಂಡರೆ ಅವರ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಸಂಜೆ ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಹಾಗೂ ಅಧಿಕಾರಿಗಳು ಮಾಯಮ್ಮನಪಾಳ್ಯಕ್ಕೆ ಭೇಟಿ ನೀಡಿ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ಸೂಚಿಸಿದರು.

ಹೊರರಾಜ್ಯ; ಮಾಹಿತಿ ನೀಡಿ
ನಿಮ್ಮ ಊರಿಗೆ, ಪಕ್ಕದ ಮನೆಗೆ ಹೊರರಾಜ್ಯದಿಂದ ಯಾರಾದರೂ ಇತ್ತೀಚೆಗೆ ಬಂದಿದ್ದಾರೆಯೇ 0816–2252371, 2252372 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಮಾಹಿತಿ ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.