ADVERTISEMENT

ಮನೆಯಲ್ಲೆ ‘ಸಪ್ತಪದಿ’ ತುಳಿದ ಜೋಡಿ

ಲಾಕ್‌ಡೌನ್‌ನಿಂದಾಗಿ ತಡವಾಗುತ್ತಿದೆ ಸರ್ಕಾರದ ‘ಸಪ್ತಪದಿ’ ಕಾರ್ಯಕ್ರಮ

ಅನಿಲ್ ಕುಮಾರ್ ಜಿ
Published 22 ಜೂನ್ 2020, 9:28 IST
Last Updated 22 ಜೂನ್ 2020, 9:28 IST

ತುಮಕೂರು: ಸರ್ಕಾರದ ‘ಸಪ್ತಪದಿ’ ಕಾರ್ಯಕ್ರಮದಡಿ ಮದುವೆ ಮಾಡಿಕೊಳ್ಳಲು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದ ಹಲವು ಮಂದಿ ಇದೀಗ ತಮ್ಮ ಸ್ವಂತ ಹಣದಿಂದಲೇ ವಿವಾಹವಾಗುತ್ತಿದ್ದಾರೆ.

ವಿವಾಹಗಳು ದುಬಾರಿ ಆಗುತ್ತಿರುವ ಈ ಹೊತ್ತಿನಲ್ಲಿ ಬಡವರ ಹಿತದೃಷ್ಟಿಯಿಂದ ರಾಜ್ಯದ 100 ‘ಎ’ ದರ್ಜೆ ದೇವಾಲಯಗಳಲ್ಲಿ ಏ.26ರಂದು ಸಪ್ತಪದಿ ವಿವಾಹ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿತ್ತು.

ಜಿಲ್ಲೆಯ ಎಡೆಯೂರು, ದೇವರಾಯನದುರ್ಗ ಹಾಗೂ ಹಳೇವೂರು ದೇವಸ್ಥಾನಗಳಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲು ಸರ್ಕಾರ ನಿಶ್ಚಯಿಸಿದೆ. ಈ ದೇವಾಲಯದ ಆಡಳಿತ ಮಂಡಳಿಗಳಗೆ ಜಿಲ್ಲೆಯ ಹಲವು ಮಂದಿ ಅರ್ಜಿ ಸಲ್ಲಿಸಿ ‘ಸಪ್ತಪದಿ’ ಕಾರ್ಯಕ್ರಮದಡಿ ನೋಂದಾಯಿ ಸಿಕೊಂಡಿದ್ದರು. ಆದರೆ, ಲಾಕ್‌ಡೌನ್‌ ಈ ಎಲ್ಲ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡಿದೆ.

ADVERTISEMENT

ಹೀಗೆ ವಿವಾಹಕ್ಕೆ ನೋಂದಾಯಿಸಿಕೊಂಡಿದ್ದ ಬಹುತೇಕ ಮಂದಿ ಈಗ ಮನೆಗಳಲ್ಲಿಯೇ ವಿವಾಹವಾಗುತ್ತಿದ್ದಾರೆ. ಈ ವರೆಗೆ ಸರ್ಕಾರ ಯಾವುದೇ ದಿನಾಂಕ ನಿಗದಿ ಮಾಡದ ಕಾರಣ ಹಾಗೂ ಅನೇಕರು ಈಗಾಗಲೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಕಾರಣ ಸ್ವಂತ ಹಣದಿಂದ ಮನೆಗಳಲ್ಲಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಶೇ 80 ಮಂದಿ ಮದುವೆ: ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು 62 ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಈಗಾಗಲೇ 43 ಮಂದಿ ಮದುವೆ ಮಾಡಿಕೊಂಡಿದ್ದಾರೆ. ದೇವರಾಯನದುರ್ಗ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯದಲ್ಲಿ ಮದುವೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದ 10 ಮಂದಿಯಲ್ಲಿ ಈಗಾಗಲೇ 8 ಮಂದಿ ವಿವಾಹವಾಗಿದ್ದಾರೆ. ಇನ್ನೂ ಹಳೆಯೂರು ಹುಲಿಯೂರಮ್ಮ ‘ಸಪ್ತಪದಿ’ ಅಡಿ ಅರ್ಜಿ ಸಲ್ಲಿಸಿದ್ದ 10 ಜನರಲ್ಲಿ ಪ್ರಸ್ತುತ ಎಷ್ಟು ಮಂದಿ ಮದುವೆ ಮಾಡಿಕೊಂಡಿದ್ದಾರೆ
ಎಂಬ ಬಗ್ಗೆ ನಿಖರ ಮಾಹಿತಿ
ಸಿಕ್ಕಿಲ್ಲ.

ಈ ಕಾರ್ಯಕ್ರಮದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಪ್ರತಿ ‌ವರನಿಗೆ ₹5 ಸಾವಿರ ಹಾಗೂ ವಧುವಿಗೆ ₹10 ಸಾವಿರ ಹಾಗೂ ಸರ್ಕಾರದಿಂದ ಚಿನ್ನದ ತಾಳಿ, 2 ಚಿನ್ನದ ಗುಂಡು ಸೇರಿ ಪ್ರತಿ ಜೋಡಿಗೆ ₹55 ಸಾವಿರ ಖರ್ಚು ಮಾಡಲು ನಿರ್ಧರಿಸಿತ್ತು.

ಸಪ್ತಪದಿ ಪರಿಕಲ್ಪನೆಯಡಿ ವಿವಾಹವಾಗುವ ಜೋಡಿಗಳಿಗೆ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿ ₹10 ಸಾವಿರ ಬಾಂಡ್, ಪರಿಶಿಷ್ಟರಿಗೆ ₹50 ಸಾವಿರ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿತ್ತು. ವಧು–ವರರ ಮನೆಯವರೂ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಲಾಕ್‌ಡೌನ್‌ ಎಲ್ಲ ಶ್ರಮವನ್ನು ವ್ಯರ್ಥ ಮಾಡಿದೆ.

ಸಾಲ ಮಾಡಿ ಮದುವೆ

‘ಸಪ್ತಪದಿ’ ಅಡಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದವರು ಬಹುಪಾಲು ಮಂದಿ ಬಡವರೇ ಆಗಿದ್ದರು. ಸರ್ಕಾರವೇ ಪ್ರತಿಯೊಂದನ್ನು ನೋಡಿಕೊಳ್ಳುತ್ತಿದ್ದ ಕಾರಣ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಲಾಕ್‌ಡೌನ್‌ ಈ ಎಲ್ಲ ಆಸೆಯನ್ನು ಬುಡಮೇಲು ಮಾಡಿದೆ. ಇನ್ನೂ ಎಷ್ಟು ದಿನ ಕಾಯವುದು ಎನ್ನುವ ಕಾರಣಕ್ಕಾಗಿ ಅನೇಕರು ಸಾಲ ಮಾಡಿ ಮಕ್ಕಳ ವಿವಾಹ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.