ADVERTISEMENT

ದಿನಗೂಲಿ ನೌಕರರ‌ ಪುನರ್‌ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:23 IST
Last Updated 4 ಮಾರ್ಚ್ 2021, 4:23 IST
ಕೆಲಸದಿಂದ ತೆಗೆದಿರುವ ದಿನಗೂಲಿ ನೌಕರರ ಪುನರ್ ನೇಮಕಕ್ಕೆ ಒತ್ತಾಯಿಸಿ ಶಾಸಕ ಮಸಾಲಾ ಜಯರಾಂ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ
ಕೆಲಸದಿಂದ ತೆಗೆದಿರುವ ದಿನಗೂಲಿ ನೌಕರರ ಪುನರ್ ನೇಮಕಕ್ಕೆ ಒತ್ತಾಯಿಸಿ ಶಾಸಕ ಮಸಾಲಾ ಜಯರಾಂ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ   

ತುರುವೇಕೆರೆ: ಕೋವಿಡ್‌ನಿಂದಾಗಿ ಕೆಲಸದಿಂದ ತೆಗೆದಿದ್ದ ದಿನಗೂಲಿ, ಹೊರಗುತ್ತಿಗೆ ನೌಕರರನ್ನು ಪುನರ್ ನೇಮಿಸಿಕೊಳ್ಳಬೇಕು. ಕನಿಷ್ಠ ವೇತನವನ್ನೂ ನೀಡಬೇಕು ಎಂದು ದಿನಗೂಲಿ ನೌಕರರ ಮಹಾಮಂಡಲ ತುರುವೇಕೆರೆ ಶಾಖೆ ಅಧ್ಯಕ್ಷ ಕೆಂಪಯ್ಯ, ಕಾರ್ಯದರ್ಶಿ ಗಿರೀಶ್ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ವೃತ್ತದಲ್ಲಿ ಸಮಾವೇಶಗೊಂಡು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಪಶು, ಕೃಷಿ, ಹೇಮಾವತಿ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಹಳ್ಳಿಕಾರ್ ಸಂವಹನ ಕೇಂದ್ರ, ಪಟ್ಟಣ ಪಂಚಾಯಿತಿ, ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆ, ವಸತಿ ನಿಲಯಗಳಲ್ಲಿ 240ಕ್ಕೂ ಹೆಚ್ಚು ಕಾರ್ಮಿಕರು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷದಿಂದ ಕೊರೊನಾ ಸಂದಿಗ್ಧತೆಯಿಂದ ಇವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದರು.

ADVERTISEMENT

ಈ ಪೈಕಿ ಬಹುತೇಕ ಕಾರ್ಮಿಕರಿಗೆ ಈವರೆಗೆ ಸೇವಾ ಭದ್ರತೆಯೂ ಇಲ್ಲದೆ ವಯೋಮಿತಿಯನ್ನು ಮೀರಿದವರಾಗಿ ಬೇರೆಲ್ಲೂ ಕೆಲಸ ಮಾಡದ ಅಸಹಾಯಕತೆಯಲ್ಲಿದ್ದಾರೆ. ಕೆಲಸದಿಂದ ತೆಗೆದಿರುವ ನೌಕರರನ್ನು ಪುನರ್ ನೇಮಿಸಿಕೊಳ್ಳಬೇಕು, ಸೇವೆಗೆ ತಕ್ಕ ಸಂಬಳ ಎಂಬಂತೆ ಕನಿಷ್ಠ 4ನೇ ದರ್ಜೆ ನೌಕರರ ಸಂಬಳ ನೀಡಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.

ಮಾರ್ಚ್‌ 10ರಂದು ದಿನಗೂಲಿ ನೌಕರರ ಮಹಾಮಂಡಲದಿಂದ ಮೈಸೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಗೆ ತಾಲ್ಲೂಕಿನಿಂದ 100ಕ್ಕೂ ಹೆಚ್ಚು ದಿನಗೂಲಿ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದಿನಗೂಲಿ ನೌಕರರಾದ ಚಿಕ್ಕೇಗೌಡ, ರವಿಕುಮಾರ್, ಕೋಮಲ, ರಮೇಶ್, ಮೋಹನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.