ADVERTISEMENT

ಮತ್ತೆ ನಾಲ್ಕು ಮಂದಿಗೆ ಕೊರೊನಾ

ಅರ್ಧ ಶತಕಕ್ಕೆ ಬಂದ ಸೋಂಕಿತರ ಸಂಖ್ಯೆ; ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 15:57 IST
Last Updated 20 ಜೂನ್ 2020, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಶನಿವಾರ ಮತ್ತೆ ನಾಲ್ಕು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಪ್ರತಿ ದಿನವೂ ಸೋಂಕಿನ ಪ್ರಕರಣಗಳು ಕಂಡು ಬರುತ್ತಿವೆ. ಶಿರಾ ಮತ್ತು ತುಮಕೂರಿಗೆ ಕಾಲಿಟ್ಟಿದ್ದ ಸೋಂಕು ಈಗ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ಹರಡುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗಗಳಲ್ಲಿಯೂ ಸೋಂಕಿತರು ಕಂಡು ಬರುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನಾಗರಿಕರಲ್ಲಿ ಆತಂಕ, ತಲ್ಲಣವನ್ನು ಹೆಚ್ಚಿಸುತ್ತಿವೆ.

ಜಿಲ್ಲೆಯಲ್ಲಿ ಶನಿವಾರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50ಕ್ಕೆ ತಲುಪಿದೆ. ಒಂದು ಹಂತದಲ್ಲಿ ಸೋಂಕಿನ ಪ್ರಕರಣಗಳು ತಗ್ಗಿದ್ದವು. ಆಗೊಮ್ಮೆ ಈಗೊಮ್ಮೆ ಒಂದೊಂದು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈಗ ದಿಢೀರನೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾವುದೇ ಸಂಚಾರ ಇತಿಹಾಸವನ್ನು ಹೊಂದಿಲ್ಲದ ಹಲವು ಮಂದಿಗೆ ಪಾಸಿಟಿವ್ ಬಂದಿದೆ. ಇದು ಭಯವನ್ನು ತೀವ್ರಗೊಳಿಸಿದೆ.

ತುಮಕೂರು ನಗರ ವ್ಯಾಪ್ತಿಯ ಗೌಡಯ್ಯನಪಾಳ್ಯದ 52 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ನೆಲಮಂಗಲ ತಾಲ್ಲೂಕಿನ ಟಿ.ಬೇಗೂರಿನ ಇವರ ಅಳಿಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅವರಿಂದಲೇ ಮಹಿಳೆಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಜೂನ್ 17ರಂದು ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ADVERTISEMENT

ದಾಬಸ್‌ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ತಾಲ್ಲೂಕಿನ ಭೈರಸಂದ್ರದ 26 ವರ್ಷದ ಯುವಕನಿಗೆ ಕೊರೊನಾ ತಗುಲಿದೆ. ಈ ಇಬ್ಬರೂ ಸಂಚಾರದ ಇತಿಹಾಸ ಹೊಂದಿಲ್ಲ. ಇವರ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ತಮಿಳುನಾಡಿನಿಂದ ತಿಪಟೂರಿಗೆ ಬಂದಿದ್ದು 65 ವರ್ಷದ ಮಹಿಳೆಗೆ ರೋಗ ತಗುಲಿದೆ. ಜೂನ್ 16ರಂದು ಇವರು ತಮಿಳುನಾಡಿನಿಂದ ತಿಪಟೂರಿಗೆ ಬಂದಿದ್ದರು. 17ರಂದು ಇವರ ಗಂಟಲು ಸ್ರಾವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು.

ಇಟಲಿಯಿಂದ ಬಂದವರಿಗೆ ಕೊರೊನಾ: ಇಟಲಿಯಿಂದ ತುಮಕೂರಿಗೆ ಬಂದಿರುವ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜೂನ್ 4ರಂದು ಇಟಲಿಯಿಂದ ಭಾರತಕ್ಕೆ ಬಂದ 25 ವರ್ಷದ ಇವರನ್ನು ನವದೆಹಲಿಯ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಇರಿಸಲಾಗಿತ್ತು. ಜೂನ್ 12ರಂದು ಈ ಯುವಕ ಬೆಂಗಳೂರಿಗೆ ಬಂದು ಅಲ್ಲಿಂದ ಅಂದೇ ತುಮಕೂರು ಪ್ರವೇಶಿಸಿದ್ದರು. ಇವರಲ್ಲಿ ಅಂದೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ಈ ನಾಲ್ಕು ಮಂದಿಯನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ವಾಸಿಸುತ್ತಿದ್ದ ಮನೆ ಹಾಗೂ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.