ADVERTISEMENT

ಆರೋಗ್ಯ ಇಲಾಖೆಯ ಎಡವಟ್ಟು: ಮೃತ ವ್ಯಕ್ತಿಗೆ ಕೋವಿಡ್‌ ಲಸಿಕೆ!

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:53 IST
Last Updated 30 ಜನವರಿ 2022, 19:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತುಮಕೂರು: ವ್ಯಕ್ತಿಯೊಬ್ಬ ಮೃತಪಟ್ಟ 7 ತಿಂಗಳ ನಂತರ, ಆ ವ್ಯಕ್ತಿ 2ನೇ ಡೋಸ್‌ ಕೋವಿಡ್‌ ಲಸಿಕೆ ಪಡೆದ ಬಗ್ಗೆ ಆರೋಗ್ಯ ಇಲಾಖೆಯಿಂದ ಕುಟುಂಬಸ್ಥರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗಿದ್ದು, ಕುಟುಂಬ ಸದಸ್ಯರು ಸಂದೇಶ ನೋಡಿ ಕಂಗಾಲಾಗಿದ್ದಾರೆ.

ಸದಾಶಿವ ನಗರದ ನಿವಾಸಿ ಎಂ.ಎಲ್‌.ಬಸಪ್ಪ ಎಂಬುವವರು ಕಳೆದ ಜೂನ್‌ ತಿಂಗಳಿನಲ್ಲಿ ಮೃತಪಟ್ಟಿದ್ದರು. ಏಪ್ರಿಲ್ ತಿಂಗಳಿನಲ್ಲಿ ಮೊದಲ ಡೋಸ್‌ ಲಸಿಕೆ ಪಡೆದಿದ್ದರು. ಮೃತ ವ್ಯಕ್ತಿ ಜನವರಿ 29 ರಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಡೋಸ್‌ ಕೋವಿಶೀಲ್ಡ್‌ ಲಸಿಕೆ ಪಡೆದಿದ್ದಾರೆ ಎಂದು ಮೊಬೈಲ್‌ ಸಂಖ್ಯೆಗೆ ಸಂದೇಶ ಕಳುಹಿಸಲಾಗಿದೆ. ಮೃತರ ಜೊತೆಗೆ ಮೃತನ ಕುಟುಂಬದ ಮೂರು ಜನರ ಹೆಸರಲ್ಲಿ ಲಸಿಕೆ ಪಡೆದ ಸಂದೇಶ ಮತ್ತು ಪ್ರಮಾಣಪತ್ರ ರವಾನಿಸಿದ್ದು, ಇದನ್ನು ಕಂಡ ಸದಸ್ಯರು ಬೆರಗಾಗಿದ್ದಾರೆ.

ಮೃತನ ಕುಟುಂಬ ಸದಸ್ಯರು ಕಳೆದ ಮೂರು ತಿಂಗಳ ಹಿಂದೆಯೇ ಎರಡನೇ ಡೋಸ್‌ ಲಸಿಕೆ ಪಡೆದಿದ್ದರು. ಮೃತರ ಮಗ ಪಂಚಾಕ್ಷರಯ್ಯ ಮತ್ತು ಮಗಳು ಮತ್ತೊಮ್ಮೆ ಎರಡನೇ ಡೋಸ್‌ ಲಸಿಕೆ ಪಡೆದ ಕುರಿತು ಸಂದೇಶ ರವಾನಿಸಲಾಗಿದೆ. ಮೂರು ಜನ ಲಸಿಕೆ ಪಡೆದ ಬಗ್ಗೆ ಒಂದೇ ಮೊಬೈಲ್‌ ಸಂಖ್ಯೆ ಮೂರು ಸಂದೇಶಗಳು ಬಂದಿವೆ.

ADVERTISEMENT

ರಾಜ್ಯದಲ್ಲಿ ಇಂತಹ ಪ್ರಕರಣಗಳು ಹಲವು ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಘಟನೆ ಕಂಡು ಸಾರ್ವಜನಿಕರು ಬೆರಗಾಗಿದ್ದಾರೆ. ಇದೇ ರೀತಿ ಇನ್ನು ಎಷ್ಟು ಜನರಿಗೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲಾಗಿದೆ ಎಂದು ಸುಳ್ಳು ಸಂದೇಶ ಕಳುಹಿಸಿರಬಹುದು ಎನ್ನುವುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

ಒಬ್ಬರಿಗೆ ಸಂದೇಶ ಕಳುಹಿಸಿದ್ದರೆ ಏನೋತಾಂತ್ರಿಕ ಸಮಸ್ಯೆಯಿಂದಾಗಿ ಬಂದಿರಬಹುದು ಅಂತ ಸುಮ್ಮನಿರಬಹುದು. ಆದರೆ, ಮನೆಯ ಮೂರು ಜನರಿಗೆ ಇದೇ ರೀತಿ ಸಂದೇಶ ಬಂದಿರುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆರೋಗ್ಯ ಇಲಾಖೆಯ ಎಡವಟ್ಟು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಲಾಖೆಯ ವಿರುದ್ಧ ನಗರದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.‌

ಲಸಿಕೆ ಪಡೆಯದೇ ಇದ್ದವರಿಗೆ, ಸತ್ತವರಿಗೆ ಈ ರೀತಿ ಸಂದೇಶ ಕಳುಹಿಸಿ, ಸುಳ್ಳು ಲೆಕ್ಕ ಬರೆಯವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮೃತರ ಮಗ ಪಂಚಾಕ್ಷರಯ್ಯ ಬೇಸರದ ಮಾತಗಳನ್ನಾಡಿದರು.

‘ಇಂತಹ ಸಂದೇಶ ಹೋಗಿರುವುದು ಇದೇ ಮೊದಲು. ಘಟನೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಕೋವಿಡ್‌ ಲಸಿಕೆಯ ಪ್ರಮಾಣಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.