ADVERTISEMENT

ಬೆಳೆ ಹಾನಿ: ಪರಿಹಾರಕ್ಕೆ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 4:50 IST
Last Updated 17 ನವೆಂಬರ್ 2021, 4:50 IST
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮ ಸಮೀಪದ ಹೊಲಕ್ಕೆ ಭೇಟಿನೀಡಿ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಪರಿಶೀಲಿಸಿದರು. ಅಧಿಕಾರಿಗಳಾದ ಸಿದ್ದೇಶ್ವರ, ಕಂದಾಯ ಇಲಾಖೆಯ ಬಸವರಾಜು, ಮುಖಂಡರಾದ ನವೀನ್, ರೇವಣಸಿದ್ದಯ್ಯ, ನರಸಿಂಹರಾಜ್, ಹರೀಶ್, ಯದು, ಜಿ.ಎಲ್.ಗೌಡ, ಸಾಹಿರಾಭಾನು, ಗೀತಾ ಇದ್ದರು
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮ ಸಮೀಪದ ಹೊಲಕ್ಕೆ ಭೇಟಿನೀಡಿ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಪರಿಶೀಲಿಸಿದರು. ಅಧಿಕಾರಿಗಳಾದ ಸಿದ್ದೇಶ್ವರ, ಕಂದಾಯ ಇಲಾಖೆಯ ಬಸವರಾಜು, ಮುಖಂಡರಾದ ನವೀನ್, ರೇವಣಸಿದ್ದಯ್ಯ, ನರಸಿಂಹರಾಜ್, ಹರೀಶ್, ಯದು, ಜಿ.ಎಲ್.ಗೌಡ, ಸಾಹಿರಾಭಾನು, ಗೀತಾ ಇದ್ದರು   

ತುಮಕೂರು: ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದ್ದು, ತಕ್ಷಣ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ತಾಲ್ಲೂಕಿನ ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಹೊಲಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕೊಯ್ಲಿಗೆ ಬಂದ ಬೆಳೆಗಳು ಕೊಳೆತು ಹಾಳಾಗಿವೆ. ಶೇಂಗಾ, ರಾಗಿ, ಭತ್ತ, ತೊಗರಿ, ಸೂರ್ಯಕಾಂತಿ ಸೇರಿದಂತೆ ಸಾಕಷ್ಟು ಬೆಳೆಗಳು ಹೊಲದಲ್ಲೇ ಕೊಳೆಯುತ್ತಿವೆ. ಬಿತ್ತನೆ ಮಾಡುವಾಗ ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟಿತು. ನಂತರ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗಲಿಲ್ಲ. ಇದರ ನಡುವೆಯೂ ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ. ಈಗ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ADVERTISEMENT

ಕಟಾವಿಗೆ ಬರುವ ಹೊತ್ತಿಗೆ ಮಳೆ ಸುರಿಯುತ್ತಿದ್ದು, ರಾಗಿ ಬೆಳೆ ನಾಶವಾಗಿದೆ. ರಾಗಿ ಬೆಳೆ ಕಟಾವು ಮಾಡಲು ಒಂದಕ್ಕೆರಡು ಕೂಲಿತೆರಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳು ತೇವಾಂಶ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೊಳೆತು ಹೋಗಿವೆ. ಹೀಗಾಗಿ ತರಕಾರಿ ಮಾರುಕಟ್ಟೆಗೆ ಬಾರದೆ ಬೆಲೆ ಏರಿಕೆಯಾಗಿದೆ. ರೈತರು ನೀರಿನಲ್ಲಿ ಮುಳುಗಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ಅಧಿಕಾರಿಗಳಾದ ಸಿದ್ದೇಶ್ವರ, ಕಂದಾಯ ಇಲಾಖೆಯ ಬಸವರಾಜು, ಮುಖಂಡರಾದ ನವೀನ್, ರೇವಣಸಿದ್ದಯ್ಯ, ನರಸಿಂಹರಾಜ್, ಹರೀಶ್, ಯದು, ಜಿ.ಎಲ್.ಗೌಡ, ಸಾಹಿರಾಭಾನು, ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.