ADVERTISEMENT

ದಾಬಸ್ ಪೇಟೆ: ಬಸ್ ನಿಲ್ದಾಣವೆಂಬ ನರಕ!

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 21:47 IST
Last Updated 3 ಡಿಸೆಂಬರ್ 2020, 21:47 IST
ಬಸ್‌ ನಿಲ್ದಾಣದ ಆವರಣದಲ್ಲಿ ಕೊಳಚೆ ನೀರು ನಿಂತಿರುವ ದೃಶ್ಯ
ಬಸ್‌ ನಿಲ್ದಾಣದ ಆವರಣದಲ್ಲಿ ಕೊಳಚೆ ನೀರು ನಿಂತಿರುವ ದೃಶ್ಯ   

ದಾಬಸ್ ಪೇಟೆ: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ಅಕ್ಷರಶಃ ನರಕದಂತಾಗಿದೆ. ಒಂದೆಡೆ ಕೊಳಚೆ ನೀರು. ಮತ್ತೊಂದೆಡೆ ಶೌಚಾಲಯದ ತ್ಯಾಜ್ಯ. ತಡೆಯಲಾಗದ ದುರ್ವಾಸನೆ, ಹೆಚ್ಚುತ್ತಿರುವ ಸೊಳ್ಳೆಗಳು ಪ್ರಯಾಣಿಕರಿಗೆ ಆಹ್ವಾನ ನೀಡುತ್ತಿವೆ. ಹೆಸರಿಗೆ ಸರ್ಕಾರಿ ಬಸ್ ನಿಲ್ದಾಣವಾಗಿದ್ದರೂ ಖಾಸಗಿ ಬಸ್, ಆಟೊ, ಸ್ಕೂಟರ್, ಕಾರುಗಳು ಇಲ್ಲಿಯೇ ಠಿಕಾಣಿ ಹೂಡಿರುತ್ತವೆ.

ರಾಷ್ಟ್ರೀಯ ಹೆದ್ದಾರಿ 4 ಮತ್ತು 207ರಲ್ಲಿ ಹಾದುಹೋಗಿರುವ ಪಟ್ಟಣವು ರಾಜಧಾನಿ ಬೆಂಗಳೂರು, ತುಮಕೂರು, ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ, ಪಾವಗಡ ಮಧುಗಿರಿ ಹೀಗೆ ವಿವಿಧ ಜಿಲ್ಲೆ, ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ಗೊರವನಹಳ್ಳಿ, ದೇವರಾಯನದುರ್ಗ, ಸಿದ್ಧಗಂಗಾ ಮಠ, ಶಿವಗಂಗೆ, ಘಾಟಿ ಸುಬ್ರಹ್ಮಣ್ಯ ದೇವಾಲಯ ಹಾಗೂ ಹಲವು ಪ್ರವಾಸಿ ತಾಣಗಳಿಗೂ ಸಂಪರ್ಕ ಕಲ್ಪಿಸುತ್ತದೆ.

ದಾಬಸ್ ಪೇಟೆ ಹೋಬಳಿ ಕೇಂದ್ರವೂ ಆಗಿದೆ. ಪಟ್ಟಣದಲ್ಲಿ ಐದು ಹಂತದ ಕೈಗಾರಿಕಾ ಪ್ರದೇಶಗಳಿಗೆ ಭೂಮಿ ಮಂಜೂರು ಆಗಿದ್ದು, ನೂರಾರು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಪಟ್ಟಣದಲ್ಲಿಯೇ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ.

ADVERTISEMENT

ದಿನನಿತ್ಯ ಕಾರ್ಖಾನೆಗೆ ಬರುವವರು, ರೈತರು, ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಿಗಳು, ವಿವಿಧ ಕೆಲಸ ಕಾರ್ಯಗಳಿಗೆ ಬರುವವರು ಬಸ್‌ಗಳನ್ನೇ ಅವಲಂಬಿಸಿದ್ದು, ಇದೇ ನಿಲ್ದಾಣಕ್ಕೆ ಬರುತ್ತಾರೆ.

‘ನಿಲ್ದಾಣದ ಆವರಣ ಶುಚಿಯಾಗಿಲ್ಲ. ಶೌಚಾಲಯ ನಿರ್ವಹಣೆ ಸರಿಯಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಈ ನಿಲ್ದಾಣದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಸ್ಥಳೀಯರಾದ ಭಾನುಪ್ರಕಾಶ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.