ADVERTISEMENT

ಸ್ವಾಭಿಮಾನಿ ಬದುಕಿಗೆ ದಾರಿಯಾದ ಹೈನುಗಾರಿಕೆ: ಡಿ.ವಿ.ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 14:23 IST
Last Updated 31 ಜನವರಿ 2025, 14:23 IST
ಕುಣಿಗಲ್ ತಾಲ್ಲೂಕಿನಿಂದ ಸತತ 6ನೇ ಬಾರಿಗೆ ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಡಿ.ಕೃಷ್ಣಕುಮಾರ್ ಅವರನ್ನು ತಾಲ್ಲೂಕು ಹಾಲು ಉತ್ಪಾದಕರ ಸಂಘಗಳಿಂದ ಗೌರವಿಸಲಾಯಿತು
ಕುಣಿಗಲ್ ತಾಲ್ಲೂಕಿನಿಂದ ಸತತ 6ನೇ ಬಾರಿಗೆ ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಡಿ.ಕೃಷ್ಣಕುಮಾರ್ ಅವರನ್ನು ತಾಲ್ಲೂಕು ಹಾಲು ಉತ್ಪಾದಕರ ಸಂಘಗಳಿಂದ ಗೌರವಿಸಲಾಯಿತು   

ಕುಣಿಗಲ್: ನಾಡಿನಲ್ಲಿ ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಹಾಲು ಉತ್ಪಾದಕರ ಸಂಘಗಳಿಂದ ಸತತ 6 ನೇ ಬಾರಿಗೆ ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಡಿ.ಕೃಷ್ಣಕುಮಾರ್ ರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದಲ್ಲಿ ಆರ್ಥಿಕ ಹಿನ್ನೆಡೆಯಾಗಿದ್ದಾಗ, ದೇಶದಲ್ಲಿ ಆರ್ಥಿಕ ಸಬಲೀಕರಣಕ್ಕೆ ಕೈ ಹಿಡಿದಿದ್ದು ಉಳಿತಾಯ ವ್ಯವಸ್ಥೆ ಮತ್ತು ಸಹಕಾರ ಸಂಘಗಳು. ಸಹಕಾರ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಸಂಘಗಳಿಂದಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ಕಾರಣವಾಗಿದ್ದು, ಮಹಿಳೆಯರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಹೈನುಗಾರಿಕೆ ನಿರಂತರ ಪ್ರಗತಿ ಸಾಧಿಸಲು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ತುಮುಲ್ ಮಾಡುತ್ತಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿ ಹಣ ದುರುಪಯೋಗದ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದರು.

ADVERTISEMENT

ಸಮಾಜದಲ್ಲಿ ವ್ಯಕ್ತಿ ಶಕ್ತಿಯಾಗಿ ಜನಮನದಲ್ಲಿ ನಿಲ್ಲಬೇಕಾದರೆ ನಿರಂತರ ಶ್ರಮವಿರಬೇಕು. ಡಿ.ಕೃಷ್ಣಕುಮಾರ್ ತಾಲ್ಲೂಕಿನ ಕ್ಷೀರಕ್ರಾಂತಿಗೆ ಶ್ರಮಿಸಿರುವ ಕಾರಣ 6ನೇ ಬಾರಿಗೆ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಮಸ್ಯೆಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲು ಸಲಹೆ ನೀಡಿದರು.

ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್ ಮಾತನಾಡಿ, ‘ಎರಡನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ಡಾ.ರಂಗನಾಥ್ ಅವರಿಗೆ ಕ್ಷೇತ್ರದ ಅಭಿವೃದ್ಧಿಗಿಂತಲೂ, ಡಿ.ಕೃಷ್ಣಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡುತ್ತಿದ್ದಾರೆ. ತುಮುಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗದಂತೆ ಎಲ್ಲ ರೀತಿಯ ಕುತಂತ್ರ ಮಾಡಿದರೂ, ತಾಲ್ಲೂಕಿನ ಕ್ಷೀರಕ್ರಾಂತಿಗೆ ಶ್ರಮಿಸಿದ ಫಲವಾಗಿ 6ನೇ ಬಾರಿಗೆ ಆಯ್ಕೆಯಾಗಿದ್ದೇನೆ’ ಎಂದರು.

ಶಾಸಕರು, ನಾಮನಿರ್ದೇಶನದ ಮೂಲಕ ತುಮುಲ್ ಪ್ರವೇಶ ಮಾಡಲು ಸಂಚು ಮಾಡಿ ವಿಫಲರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಹಾಲು ಉತ್ಪಾದಕರ ಮತ್ತು ರೈತರ ಸೇವ ಸಹಕಾರ ಸಂಘದ ಚುನಾವಣೆಯಲ್ಲಿ ಮೂಗು ತೂರಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿ, ಜೆಡಿಎಸ್ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ನಿರಂತರವಾಗಿ ಉಲಂಘನೆ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಮುಖಂಡರನ್ನು ದುಷ್ಟಶಕ್ತಿ ಎಂದು ಲೇವಡಿ ಮಾಡುತ್ತಿದ್ದಾರೆ. ಆದರೆ ಶಾಸಕರೇ ತಾಲ್ಲೂಕಿನ ದುಷ್ಟಶಕ್ತಿಯಾಗಿ ಆವರಿಸಿಕೊಂಡು ಲಿಂಕ್ ಕೆನಾಲ್ ಜಪ ಮಾಡುತ್ತಾ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಸಂಚು ಮಾಡುತ್ತಿದ್ದಾರೆ ಎಂದು ದೂರಿದರು.

ತುಮುಲ್ ನಿರ್ದೇಶಕರಾದ ಎಸ್.ಆರ್.ಗೌಡ, ಬಿ.ಎನ್.ಶಿವಪ್ರಕಾಶ್, ಸಿದ್ದಗಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಬಿಜೆಪಿ ಅಧ್ಯಕ್ಷ ಬಲರಾಂ, ಮಾಜಿ ಅಧ್ಯಕ್ಷ ಬಿ.ಆರ್., ನಾರಾಯಣಗೌಡ, ಶ್ರೀನಿವಾಸ್ ಗೌಡ, ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರು, ಕಾರ್ಯದರ್ಶಿಗಳು ಭಾಗವಹಿಸಿದ್ದರು.

ರಾಜ್ಯ ಸರ್ಕಾರ ಮೈಕ್ರೊ ಫೈನಾನ್ಸ್‌ಗಳ ವಿರುದ್ಧ ದಿಟ್ಟ ಕ್ರಮಗಳನ್ನು ತೆಗದುಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಮೈಕ್ರೊ ಫೈನಾನ್ಸ್‌ ಹಾವಳಿ ತಡೆಗೆ ಬಿಗಿಯಾದ ಕಾನೂನು ಮತ್ತು ಸಾರ್ವಜನಿಕ ಶಕ್ತಿ ಒಂದಾಗಬೇಕಿದೆ
ಡಿ.ವಿ. ಸದಾನಂದ ಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.