ಕುಣಿಗಲ್: ದಲಿತರ ಸಮಸ್ಯೆಗಳಿಗೆ ತಹಶೀಲ್ದಾರ್ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಮಧ್ಯಾಹ್ನದಿಂದ ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಗುರುವಾರವು ಮುಂದುವರೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ತಹಶೀಲ್ದಾರ್ ಕಳೆದ ಎರಡು ವರ್ಷದಿಂದ ಪರಿಶಿಷ್ಟ ಜಾತಿ ಮತ್ತ ಪಂಗಡಗಳ ಕುಂದುಕೊರತೆ ಸಭೆಯನ್ನು ಸಕಾಲಕ್ಕೆ ನಡೆಸದ ಕಾರಣ ದಲಿತರ ಸಮಸ್ಯೆಗಳು ಹೆಚ್ಚಾಗಿದೆ. ಹತ್ತು ಹಲವು ಬಾರಿ ಮನವಿ ಮಾಡಿದ ಪರಿಣಾಮ ಕಳೆದ 23 ರಂದು ಸಭೆ ಕರೆದಿದ್ದರೂ, ಸಮಸ್ಯೆಗಳು ಬಗೆಹರಿಸದೆ ಕೇವಲ ಚರ್ಚೆಗಳು ಮಾತ್ರ ನಡೆದು, ಸಭೆಯನ್ನು ಮತ್ತೆ ಇದೇ 12ರಂದು ಕರೆಯಲಾಗಿತ್ತು. ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರೂ, ಗಮನಹರಿಸದೆ ಗುಂಪುಗಾರಿಕೆ ಮಾಡಿ ಮತ್ತೊಂದು ಗುಂಪಿನೊಂದಿಗೆ ಸೇರಿ ಸಭೆ ನಡೆಸಿದ್ದಾರೆ. ದಲಿತರ ಜಮೀನು ಮತ್ತು ರಸ್ತೆ ಸಮಸ್ಯೆಗಳನ್ನು ಬಗೆಹರಿಸಲು ಹಶೀಲ್ದಾರ್ ಸಂಫೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು.
ತಾಲ್ಲೂಕಿನ ಬೆಣಚುಕಲ್ಲು, ತೆರದಕುಪ್ಪೆ, ಗುನ್ನಾಗರೆ, ಕೊಡವತ್ತಿ, ಮಲ್ಲಾಪುರ, ಗೋವಿಂದಯ್ಯನಪಾಳ್ಯ ವಾಣಿಗೆರೆ, ನಾಗಲಾಪುರ ಗ್ರಾಮಗಳಲ್ಲಿ ದಲಿತರ ಜಮೀನಿಗೆ ಹೋಗುವ ರಸ್ತೆಗಳನ್ನು ಬಲಾಡ್ಯರು ಅಡ್ಡಗಟ್ಟಿ ಉಳುಮೆಗೆ ಅಡ್ಡಿಪಡಿಸುತ್ತಿದ್ದಾರೆ. ಚಾಕೇನಹಳ್ಳಿ, ಹೆಗ್ಗಡತಿಹಳ್ಳಿ, ಬಸವಮತ್ತಿಕೆರೆ ಗ್ರಾಮದಲ್ಲಿ ದಲಿತರ ಜಮೀನುಗಳಿಗೆ ಬಲಾಡ್ಯರು ಅತಿಕ್ರಮ ಪ್ರವೇಶ ಮಾಡಿ ಉಳುಮೆಗೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ದಲಿತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರಿರುವ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ್ ನಾರಾಯಣ್, ಎಸ್.ಆರ್.ಚಿಕ್ಕಣ್ಣ, ಶಿವಶಂಕರ್, ಕುಮಾರ್, ರಾಮಕೃಷ್ಣ ಸುರೇಶ್, ರಾಮಲಿಂಗಯ್ಯ, ರಾಜು, ಬಿ.ಡಿ.ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.