ADVERTISEMENT

ತುಮಕೂರು | ಕನ್ನಡ ಬಾವುಟಕ್ಕೆ ಹಾನಿ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 4:23 IST
Last Updated 28 ನವೆಂಬರ್ 2023, 4:23 IST
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಜತೆ ಕನ್ನಡಪರ ಸಂಘಟನೆಗಳ ಮುಖಂಡರು ಚರ್ಚಿಸಿದರು. ಮುಖಂಡರಾದ ಧನಿಯಕುಮಾರ್, ರಂಗಸ್ವಾಮಿ, ಆನಂದ್, ಸೋಮಣ್ಣ ಇತರರು ಇದ್ದಾರೆ
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಜತೆ ಕನ್ನಡಪರ ಸಂಘಟನೆಗಳ ಮುಖಂಡರು ಚರ್ಚಿಸಿದರು. ಮುಖಂಡರಾದ ಧನಿಯಕುಮಾರ್, ರಂಗಸ್ವಾಮಿ, ಆನಂದ್, ಸೋಮಣ್ಣ ಇತರರು ಇದ್ದಾರೆ   

ತುಮಕೂರು: ನಗರದ ವಿವಿಧೆಡೆ ಕನ್ನಡಪರ ಸಂಘಟನೆಗಳು, ಆಟೊ ಚಾಲಕರ ಸಂಘಗಳು ಹಾರಿಸಿದ್ದ ಕನ್ನಡ ಬಾವುಟಗಳನ್ನು ಕಿತ್ತು ಚರಂಡಿಗೆ ಎಸೆದಿರುವ ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ಒತ್ತಾಯಿಸಿದರು.

ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ, ಆಯುಕ್ತರಾದ ಬಿ.ವಿ.ಅಶ್ವಿಜ ಜತೆಗೆ ಚರ್ಚಿಸಿದರು. ಕನ್ನಡಪರ ಸಂಘಟನೆಗಳು ಹಾಗೂ ಕ್ರೀಡಾ ಚಟುವಟಿಕೆ ಸಂದರ್ಭದಲ್ಲಿ ಪ್ರದರ್ಶಿಸುವ ಬಾವುಟ, ಪ್ಲೆಕ್ಸ್, ಬ್ಯಾನರ್‌ಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಕನ್ನಡ ಸೇನೆ ಅಧ್ಯಕ್ಷ ಧನಿಯಕುಮಾರ್, ‘ಸಾರ್ವಜನಿಕರಿಗೆ ತೊಂದರೆಯಾಗದಂತೆ ಕನ್ನಡಪರ ಸಂಘಟನೆಗಳು ಕನ್ನಡ ಬಾವುಟ ಹಾರಿಸಿ ರಾಜ್ಯೋತ್ಸವ ಆಚರಿಸಿದ್ದಾರೆ. ಎರಡು ಕಡೆ ಬಾವುಟಗಳನ್ನು ಕಿತ್ತು ಚರಂಡಿಗೆ ಎಸೆದಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ನಗರದಲ್ಲಿ ಆಂಗ್ಲ ಭಾಷಾ ನಾಮಫಲಕಗಳು ರಾರಾಜಿಸುತ್ತಿವೆ. ನಿಯಮದ ಪ್ರಕಾರ ಅವರಿಗೆ ದಂಡ ವಿಧಿಸಲು ಅವಕಾಶವಿದೆ. ಆದರೆ ಈವರೆಗೂ ದಂಡವಿಧಿಸಿಲ್ಲ. ಆದರೆ ನಾವು ಹಾಕಿದ್ದ ಬಾವುಟ ಕಿತ್ತು ಹಾಕಿ, ಬ್ರಿಟಿಷ್ ಆಡಳಿತದಂತೆ ವರ್ತಿಸಿದ್ದಾರೆ ಎಂದು ದೂರಿದರು.

ಮೇಯರ್ ಪ್ರಭಾವತಿ, ಕನ್ನಡಪರ ಸಂಘಟನೆಗಳು ಹಾಕುವ ಪ್ಲೆಕ್ಸ್‌ಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ರಂಗಸ್ವಾಮಿ, ಆನಂದ್, ಸೋಮಣ್ಣ, ಶಂಕರ್, ರಕ್ಷಿತ್ ಕರಿಮಣಿ, ಕನ್ನಡ ಪ್ರಕಾಶ್ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.