ADVERTISEMENT

ಹಾಸ್ಟೆಲ್‌ನಲ್ಲಿ ನೃತ್ಯ: ಕ್ರಮಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:33 IST
Last Updated 1 ಆಗಸ್ಟ್ 2024, 7:33 IST

ತುಮಕೂರು: ನಗರದ ಹೊರ ವಲಯದ ಗೆದ್ದಲಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನೃತ್ಯ ಮಾಡಿ, ಹೆಣ್ಣು ಮಕ್ಕಳ ಗೌರವ, ಸ್ವಾತಂತ್ರ್ಯ, ಗೌಪ್ಯತೆಗೆ ಧಕ್ಕೆ ತಂದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಯೋಗ ರಚಿಸಿದ ಮೂವರು ಸದಸ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಸಿದ್ದು, ಹೆಣ್ಣು ಮಕ್ಕಳ ಜತೆ ಅಧಿಕಾರಿಗಳು ಗೌರವಯುತವಾಗಿ ನಡೆದುಕೊಂಡಿಲ್ಲ ಎಂಬುದರತ್ತ ಬೊಟ್ಟುಮಾಡಿ ತೋರಿಸಿತ್ತು.

ಹಿಂದಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಇತರೆ ಅಧಿಕಾರಿಗಳು ಹಾಸ್ಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳು ಹೆಣ್ಣು ಮಕ್ಕಳ ಜತೆ ನೃತ್ಯ ಮಾಡಿದ ವಿಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಆಯೋಗ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸಮಿತಿ ರಚಿಸಿತ್ತು. ಇತ್ತೀಚೆಗೆ ಸಮಿತಿಯು ಆಯೋಗಕ್ಕೆ ವರದಿ ಸಲ್ಲಿಸಿತ್ತು.

ADVERTISEMENT

ಸತ್ಯ ಶೋಧನಾ ಸಮಿತಿ ನೀಡಿದ ವರದಿಯನ್ನು ಯಥಾವತ್ತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಈ ವರದಿ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚಿಸಬಹುದು. ಇಲ್ಲವೆ ಇಲಾಖೆ ವಿಚಾರಣೆ ನಡೆಸಿ ನಂತರ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಸೂಚಿಸುವ ಸಾಧ್ಯತೆಗಳಿವೆ ಎಂದು ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.

ಸಾಮಾನ್ಯವಾಗಿ ಆಯೋಗದ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಎಷ್ಟು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.