ಮಧುಗಿರಿ: ತಾಲ್ಲೂಕು ಚೋಳೇನಹಳ್ಳಿ ಕೆರೆಯಲ್ಲಿ ಜನವರಿ 21ರಂದು ದಂಡಿನ ಮಾರಮ್ಮ ದೇವಿ ತೆಪ್ಪೋತ್ಸವ ನಡೆಯಲಿದೆ. ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಗುರುವಾರ ನಡೆದ ತೆಪ್ಪೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ನಡೆದು 54 ವರ್ಷ ಕಳೆದಿದೆ. ಅದೆಷ್ಟೋ ಮಂದಿ ದೇವಿಯ ತೆಪ್ಪೋತ್ಸವವನ್ನು ನೋಡಿಯೇ ಇಲ್ಲ. ಆದ್ದರಿಂದ ಈ ತೆಪ್ಪೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಬರುವ ನಿರೀಕ್ಷೆಯಿದೆ. ಪಟ್ಟಣದ ಪ್ರಮುಖ ಬೀದಿ ಹಾಗೂ ಸರ್ಕಾರಿ ಕಟ್ಟಡ ಹಾಗೂ ದೇವಾಲಯಗಳಿಗೆ ವಿದ್ಯುತ್ ದೀಪದ ಅಲಂಕಾರ, ಎಲ್‌ಇಡಿ ವ್ಯವಸ್ಥೆ, ಕುಡಿಯುವ ನೀರು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗುವುದು. ಏಕಾಶಿಲಾ ಬೆಟ್ಟಕ್ಕೆ ವಿಶೇಷವಾಗಿ ದೀಪದ ವ್ಯವಸ್ಥೆ ಮಾಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ದೇವಿಯ ತೆಪ್ಪೋತ್ಸವ ನಡೆಯುವ ಚೋಳೇನಹಳ್ಳಿ ಕೆರೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಈಜುಪಟುಗಳನ್ನು ಕರೆಸಲಾಗುತ್ತಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾ.ಪಂ. ಇಒ ಲಕ್ಷ್ಮಣ್, ಡಿವೈಎಸ್‌ಪಿ ರಾಮಚಂದ್ರಪ್ಪ, ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಪುರಸಭೆ ಅಧ್ಯಕ್ಷ ಜಿ. ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್, ಸದಸ್ಯರು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ನಿವೃತ್ತ ಪ್ರಾಂಶುಪಾಲ ಡಿ.ಎಸ್. ಮುನೀಂದ್ರಕುಮಾರ್, ಅರ್ಚಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.