ತುಮಕೂರು: ಅಂಬಾರಿ ಹೊತ್ತ ಶ್ರೀರಾಮ ಆನೆಯ ಜತೆಗೆ ಎರಡು ಲಕ್ಷ್ಮಿ ಆನೆಗಳು ರಾಜ ಬೀದಿಯಲ್ಲಿ ಗಾಂಭೀರ್ಯದಲ್ಲೇ ಹೆಜ್ಜೆ ಹಾಕಿದರೆ, ಕಲಾ ತಂಡಗಳು ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿದವು....
ನಗರದಲ್ಲಿ ಗುರುವಾರ ‘ತುಮಕೂರು ದಸರಾ’ ಅಂಗವಾಗಿ ಜರುಗಿದ ‘ಜಂಬೂ ಸವಾರಿ’ಗೆ ಜಿಲ್ಲೆಯ ನಾನಾ ಕಡೆಗಳಿಂದ ಬಂದಿದ್ದ ಸಾವಿರಾರು ಜನ ಸಾಕ್ಷಿಯಾದರು. ಕಲಾ ತಂಡಗಳ ವೈಭವ, ಗಜ ಪಡೆಯ ಗಾಂಭೀರ್ಯದ ನಡೆಯನ್ನು ಕಣ್ತುಂಬಿಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಮೂರು ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು.
ದಸರಾ ಪ್ರಯುಕ್ತ ಜಿಲ್ಲಾ ಆಡಳಿತದಿಂದ ಸೆ. 22ರಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಕೊನೆಯ ದಿನ ನಡೆದ ಅಂಬಾರಿ ಮೆರವಣಿಗೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಟೌನ್‌ಹಾಲ್ ಬಳಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು.
ಟೌನ್‌ಹಾಲ್ ಹತ್ತಿರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ, ನಮಿಸಿದರು. ಶಾಸಕರಾದ ಟಿ.ಬಿ.ಜಯಚಂದ್ರ, ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇತರರು ಭಾಗವಹಿಸಿದ್ದರು.
ಚಾಲನೆ: ಟೌನ್‌ಹಾಲ್‌ನಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಅಶೋಕ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಸ್ವಾತಂತ್ರ್ಯ ಚೌಕ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಅಮಾನಿಕೆರೆ ರಸ್ತೆ, ಕೋತಿತೋಪು ಮುಖ್ಯರಸ್ತೆ, ಎಸ್.ಎಸ್.ವೃತ್ತದಿಂದ ಬಿ.ಎಚ್.ರಸ್ತೆ ತಲುಪಿತು. ಅಲ್ಲಿಂದ ಭದ್ರಮ್ಮ ಛತ್ರದ ಮುಖಾಂತರ ಜೂನಿಯರ್ ಕಾಲೇಜು ಬಳಿ ಕೊನೆಗೊಂಡಿತು.
ಎಸ್.ಎಸ್.ವೃತ್ತ ಬಳಿ ಸಾರ್ವಜನಿಕರು ಕುಳಿತುಕೊಂಡು ಜಂಬೂ ಸವಾರಿ ನೋಡಲು ವೇದಿಕೆ ಸಿದ್ಧ ಪಡಿಸಲಾಗಿತ್ತು. ಅಶೋಕ ನಗರ, ಕುವೆಂಪು ನಗರ ಒಳಗೊಂಡಂತೆ ಸುತ್ತಮುತ್ತಲಿನ ಪ್ರದೇಶದ ಜನರು ಇದರ ಪ್ರಯೋಜನ ಪಡೆದರು. ಮೈದಾನದಲ್ಲಿ ದೇವರ ಮೂರ್ತಿಗೆ ಶಮಿ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಯಿತು.
ವಾಹನ ನಿರ್ಬಂಧ: ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಶಾಂತಿಯುತವಾಗಿ ಮೆರವಣಿಗೆ ನೆರವೇರಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸದಾ ವಾಹನ ದಟ್ಟಣೆ ಇರುವ ಟೌನ್‌ಹಾಲ್‌ನಲ್ಲಿ ವೇದಿಕೆ ನಿರ್ಮಿಸಿದ್ದರಿಂದ ವಾಹನ ಸವಾರರು ಪರದಾಡಿದರು.
ದೇವರ ಮೂರ್ತಿಗೆ ಹೂ ಮಳೆ
ಜಂಬೂ ಸವಾರಿಯಲ್ಲಿ ನಗರದ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮಗಳ ದೇವರ ಮೂರ್ತಿಗಳು ಭಾಗವಹಿಸಿದ್ದವು. ಹಲವು ಬಗೆಯ ಹೂವುಗಳಿಂದ ಸಿಂಗರಿಸಿದ್ದ ವಾಹನದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆಗೆ ಕರೆತರಲಾಗಿತ್ತು. ದೇವರ ಮೂರ್ತಿಗಳಿಗೆ ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಲಾಯಿತು. ಜಿಲ್ಲೆಯ ಪ್ರಮುಖ ಕಲೆಗಳಾದ ಸೋಮನ ಕುಣಿತ ಡೊಳ್ಳು ಕುಣಿತ ಪಟ ಕುಣಿತ ಕಂಸಾಳೆ ಸೇರಿದಂತೆ ವೀರಗಾಸೆ ಗೊರವರ ಕುಣಿತ ಮೂಡಲಪಾಯ ಯಕ್ಷಗಾನ ತಮಟೆ ವಾದ್ಯ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಪೊಲೀಸ್ ಇಲಾಖೆಯ ಅಶ್ವದಳ ಸುಮಾರು 10ಕ್ಕೂ ಹೆಚ್ಚು ಜತೆಯ ಹಳ್ಳಿಕಾರ್ ತಳಿ ಎತ್ತುಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.