ADVERTISEMENT

ತುಮಕೂರು | ಆಯುಧ ಪೂಜೆ: ದುಬಾರಿಯಾಗದ ಹೂ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:48 IST
Last Updated 30 ಸೆಪ್ಟೆಂಬರ್ 2025, 5:48 IST
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ಸಾರ್ವಜನಿಕರು ಹೂವು ಖರೀದಿಸಿದರು
ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ಸಾರ್ವಜನಿಕರು ಹೂವು ಖರೀದಿಸಿದರು   

ತುಮಕೂರು: ದಸರಾ ಹಬ್ಬ, ಆಯುಧ ಪೂಜೆ ಆಚರಣೆಗೆ ಜನ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.

ದಸರಾ ಹಬ್ಬದ ಸಮಯದಲ್ಲಿ ಹೂವಿನ ಧಾರಣೆ ಗಗನ ಮುಟ್ಟುತ್ತಿತ್ತು. ಆದರೆ ಈ ಬಾರಿ ಅಂತಹ ವಾತಾವರಣ ಕಂಡು ಬರುತ್ತಿಲ್ಲ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ಎಂದಿನ ದರದಲ್ಲಿಯೇ ಹೂವು ಮಾರಾಟ ನಡೆಯಿತು. ಗುಲಾಬಿ ಕೆ.ಜಿ ₹350ರಿಂದ ₹400 ಇತ್ತು. ಬಿಡಿ ಸೇವಂತಿಗೆ ಕೆ.ಜಿ ₹100–₹120, ಚೆಂಡು ಹೂವು ಕೆ.ಜಿ ₹400, ಮಲ್ಲಿಗೆ ಕೆ.ಜಿ ₹1 ಸಾವಿರ, ಕನಕಾಂಬರ ಕೆ.ಜಿ ₹800ರಿಂದ ₹900ಕ್ಕೆ ಮಾರಾಟವಾಯಿತು.

ADVERTISEMENT

ಕೆ.ಜಿ ಬೂದು ಕುಂಬಳಕಾಯಿ ₹20–₹30, ಜೋಡಿ ಬಾಳೆ ಕಂದು ₹30–40ಕ್ಕೆ ಸಿಗುತಿತ್ತು. ಸೋಮವಾರ ಸಂಜೆ ವೇಳೆಗೆ ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚಿತ್ತು. ಮಂಗಳವಾರ ಮತ್ತಷ್ಟು ದಟ್ಟಣೆಯಾಗಲಿದೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಬೆಲೆ ಹೆಚ್ಚಾಗಬಹುದು ಎಂಬುದನ್ನು ಅರಿತವರು ಮುಂಚೆಯೇ ಅಗತ್ಯ ಸಾಮಗ್ರಿ ಖರೀದಿಸಿದರು.

ಕಳೆದ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಹೂವಿನ ಬೆಳೆಗೆ ಹಾನಿಯಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈ ಸೇರಲಿಲ್ಲ. ಬೆಳೆಗಾರರು ನಷ್ಟ ಅನುಭವಿಸಿದರು. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಹೂವು ಲಭ್ಯವಿಲ್ಲದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಸೇವಂತಿಗೆ, ಮಲ್ಲಿಗೆ, ಕನಕಾಂಬರ ಬೆಲೆ ಗಗನ ಮುಟ್ಟಿತ್ತು. ಪ್ರತಿ ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗಿ ಗ್ರಾಹಕರ ಜೇಬು ಸುಡುತ್ತಿತ್ತು.

ಈ ಬಾರಿ ಜಿಲ್ಲೆಯಲ್ಲಿ ಜೋರು ಮಳೆಯಾಗಿಲ್ಲ. ಸಾಧಾರಣ ಮಳೆಗೆ ಬೆಳೆ ಹಾನಿಯಾಗಿಲ್ಲ. ಇಳುವರಿ ಚೆನ್ನಾಗಿದ್ದು, ನಿರೀಕ್ಷೆಗೂ ಮೀರಿ ಹೂವು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

‘ಬುಧವಾರ, ಗುರುವಾರ ಹಬ್ಬ ಆಚರಿಸಲಾಗುತ್ತದೆ. ಮಂಗಳವಾರದಿಂದ ಹೂವಿನ ಬೆಲೆಯಲ್ಲಿ ತುಸು ಏರಿಕೆಯಾಗಬಹುದು. ಸದ್ಯಕ್ಕೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ’ ಎಂದು ಅಂತರಸನಹಳ್ಳಿ ಮಾರುಕಟ್ಟೆ ಹೂವಿನ ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದರು.

ಬೂದು ಕುಂಬಳಕಾಯಿ ಖರೀದಿ
ಮಾರುಕಟ್ಟೆ ಮುಂಭಾಗ ಬಾಳೆ ಕಂದು ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.