ತುಮಕೂರು: ಜಿಲ್ಲಾ ಆಡಳಿತ ಕಳೆದ ವರ್ಷ ಆಚರಿಸಿದ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ನಡೆದಿದೆ ಎಂದು ತುಮಕೂರು ದಸರಾ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು ಇಲ್ಲಿ ಶುಕ್ರವಾರ ಆರೋಪಿಸಿದರು.
ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಮನಸ್ಸಿಗೆ ಬಂದಂತೆ ಖರ್ಚು ಮಾಡಲಾಗಿದೆ. ಹಿಂದಿನ ವರ್ಷದ ಲೆಕ್ಕ ನೀಡದೆ, ಈಗ ಮತ್ತೊಂದು ದಸರಾ ಆಚರಣೆಗೆ ಜಿಲ್ಲಾ ಆಡಳಿತ ಮಂದಾಗಿದೆ. ಯಾವ ಮುಖಹೊತ್ತು ಮತ್ತೊಂದು ದಸರಾ ಆಚರಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ದಸರಾ ಆಚರಣೆಯಲ್ಲಿ ಆಗಿರುವ ಹಣದ ಅಕ್ರಮಗಳ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲಾತಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಅಧಿಕಾರಿಗಳು ಹಣ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ರಾಜ್ಯ ಸರ್ಕಾರದಿಂದ ₹1 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ₹15 ಲಕ್ಷವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಖರ್ಚು ಮಾಡಲಾಗಿದೆ. ಉಳಿದ ₹85 ಲಕ್ಷ ಏನಾಯಿತು? ಯಾವುದಕ್ಕೆ ಖರ್ಚಾಯಿತು? ಎಂಬ ಮಾಹಿತಿ ಕೊಡುತ್ತಿಲ್ಲ. ಜಿಲ್ಲಾ ಆಡಳಿತದ ಬಳಿ ಈ ವಿವರಗಳೇ ಇಲ್ಲ ಎಂದು ದೂರಿದರು.
ಸಾರ್ವಜನಿಕರು ಕಟ್ಟಿದ ತೆರಿಗೆ ಹಣದಲ್ಲಿ ಮಹಾನಗರ ಪಾಲಿಕೆಯಿಂದ ₹49.99 ಲಕ್ಷ ನೀಡಲಾಗಿದೆ. ಜನರ ತೆರಿಗೆ ಹಣವನ್ನು ಆಯುಕ್ತರು ದಸರಾ ಉತ್ಸವಕ್ಕೆ ಬಳಸಿದ್ದಾರೆ. ಹಿಂದೆ ತುಮಕೂರು ದಸರಾ ಸಮಿತಿಗೆ ದೇಣಿಗೆ ಕೇಳಿದಾಗ ₹25 ಸಾವಿರಕ್ಕಿಂತ ಹೆಚ್ಚು ಹಣ ನೀಡಲು ಬರುವುದಿಲ್ಲ ಎಂದು ಹೇಳಿದರು. ಆದರೆ ಜಿಲ್ಲಾ ಆಡಳಿತ ನಡೆಸುವ ದಸರಾ ಉತ್ಸವಕ್ಕೆ ₹50 ಲಕ್ಷವನ್ನು ಹೇಗೆ ಕೊಡಲು ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಟೂಡಾದಿಂದಲೂ ₹25 ಲಕ್ಷ ಪಡೆಯಲಾಗಿದೆ. ಸಾರ್ವಜನಿಕರು ದೇಣಿಗೆ ನೀಡಿದ ₹50 ಲಕ್ಷವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದರ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.
ದಸರಾಕ್ಕೆ ಸಜ್ಜು: ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ‘35ನೇ ವರ್ಷದ ದಸರಾ ಮಹೋತ್ಸವವನ್ನು ಶ್ರೀರಾಮ ಮಂದಿರದಲ್ಲಿ ಎಂದಿನಂತೆ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು’ ಎಂದು ತಿಳಿಸಿದರು.
ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮಿಕಾಂತ್, ‘ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಆಚರಣೆಗೆ ಅವಕಾಶ ಇಲ್ಲದಂತಾಗಿದೆ’ ಎಂದರು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಹೇಶ್, ಸಂಚಾಲಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಕೆ.ಶಂಕರ್ ಉಪ್ಪಾರಹಳ್ಳಿ, ಕೆ.ಪರಶುರಾಮಯ್ಯ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.