
ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 1,110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಇದರಿಂದ 18 ಸಾವಿರ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಉತ್ತಮ ಆಡಳಿತ ವಾರ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವೇಗ ನೀಡಲಾಗುತ್ತಿದ್ದು, ತುಮಕೂರು- ರಾಯದುರ್ಗ ರೈಲ್ವೆ ಕಾಮಗಾರಿಗೆ ಬೇಕಾದ ಭೂಸ್ವಾಧೀನ ವೇಗವಾಗಿ ನಡೆಯುತ್ತಿದೆ. ರೈಲ್ವೆ, ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರದ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆ ಒಂದು ಆಂದೋಲನದಂತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ‘ಜನರ ಸಮಸ್ಯೆಗೆ ಕಿವಿಗೊಡಬೇಕು. ಸಮಯಕ್ಕೆ ಸರಿಯಾಗಿ ಪರಿಹಾರ ನೀಡಿ, ಆಡಳಿತದ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಕಾಪಾಡಬೇಕು’ ಎಂದು ಸಲಹೆ ಮಾಡಿದರು.
ಕಾನೂನು ಹಾಗೂ ಯೋಜನೆಗಳು ಕಡತಗಳಲ್ಲಿ ಉಳಿಯದೆ ಅವುಗಳಿಗೆ ಮೂರ್ತ ಸ್ವರೂಪ ಕೊಟ್ಟು, ಅಂತಿಮ ಫಲಾನುಭವಿಯ ಕೈಗೆ ತಲುಪಿಸುವುದು ಕಾರ್ಯಾಂಗದ ಜವಾಬ್ದಾರಿ. ಕಾನೂನು, ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅದನ್ನು ನೀಡಬಹುದು. ಆದರೆ ಕೆಲಸ ಮಾಡುವ ಮನಸ್ಥಿತಿಯೇ ಇಲ್ಲದಿದ್ದರೆ, ಅದನ್ನು ಯಾರೂ ತಿದ್ದಲು ಸಾಧ್ಯವಿಲ್ಲ. ಆಡಳಿತದಲ್ಲಿ ಅಧಿಕಾರಿಗಳ ವರ್ತನೆ ಬಹಳ ಮುಖ್ಯ ಎಂದರು.
ಸಿದ್ಧಗಂಗಾ ಮಠದ ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವಸ್ವಾಮಿ, ‘ವ್ಯಕ್ತಿ ಸಮಸ್ಯೆ ಹೊತ್ತು ಬಂದಾಗ ಸಮಾಧಾನದಿಂದ ಆಲಿಸಿ, ಪರಿಹರಿಸುವ ಮನೋಭಾವ ಇರಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಪಾಲಿಕೆ ಆಯುಕ್ತ ಯೋಗಾನಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.