ADVERTISEMENT

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ ತುಮಕೂರಿನ ರಮೇಶ್ ಗೌಡ ಬಲಿ

ನೆಲಮಂಗಲದ ಸ್ನೇಹಿತರ ಜೊತೆ ಪ್ರವಾಸ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 12:12 IST
Last Updated 22 ಏಪ್ರಿಲ್ 2019, 12:12 IST
ರಮೇಶ್ ಗೌಡ
ರಮೇಶ್ ಗೌಡ   

ತುಮಕೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ನಗರದ ಸರಸ್ವತಿಪುರಂ ನಿವಾಸಿ ಮದ್ಯದ ವ್ಯಾಪಾರಿ ರಮೇಶ್ ಗೌಡ ಬಲಿಯಾಗಿದ್ದು ಕುಟುಂಬ ಸದಸ್ಯರಲ್ಲಿ ನೋವು ತೀವ್ರವಾಗಿದೆ. ರಮೇಶ್ ಗೌಡ ಅವರಿಗೆ ಪತ್ನಿ ಮಂಜುಳಾ, ಪುತ್ರ ಶೋಭಿತ್ ಹಾಗೂ ಪುತ್ರಿ ದಿಶಾ ಇದ್ದಾರೆ.

ವಿವಿಧ ಉದ್ಯಮಗಳಲ್ಲಿ ತೊಡಗಿದ್ದ ಅವರು ಎಂ.ಜಿ.ರಸ್ತೆಯಲ್ಲಿ ಮದ್ಯದ ಅಂಗಡಿ ನಡೆಸುತ್ತಿದ್ದರು. ನೆಲಮಂಗಲದ ಸ್ನೇಹಿತರ ಜೊತೆ ಅವರು ಶನಿವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ರಮೇಶ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಡಿವೈಎಸ್‌ಪಿ ತಿಪ್ಪೇಸ್ವಾಮಿ, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ರಮೇಶ್ ಗೌಡ ಸ್ನೇಹಿತರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ರಮೇಶ್ ಗೌಡ ಅವರ ಕುಟುಂಬ ಸದಸ್ಯರ ನೋವು ತೀವ್ರವಾಗಿತ್ತು. ಮನೆಯ ಒಳಗಿನಿಂದ ಅವರ ಕುಟುಂಬ ಸದಸ್ಯರು ಯಾರೂ ಹೊರಗೆ ಬರಲಿಲ್ಲ. ಮನೆಯೊಳಗಿನಿಂದ ಅಳುವ ಸದ್ದು ತೀವ್ರವಾಗಿ ಕೇಳುತ್ತಿತ್ತು.

ADVERTISEMENT

ನನ್ನ ಸ್ನೇಹಿತರ

‘ರಮೇಶ್ ಗೌಡ ನಾನು ಆತ್ಮೀಯ ಸ್ನೇಹಿತರು. ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಇಬ್ಬರೂ ಒಟ್ಟಿಗೆ ವ್ಯಾಸಂಗ ಮಾಡಿದ್ದೆವು. ಮಾಧ್ಯಮಗಳಿಂದ ನಾನು ವಿಷಯ ತಿಳಿದು ಬಂದೆ’ ಎಂದು ಶಾಸಕ ಜ್ಯೋತಿ ಗಣೇಶ್ ಸುದ್ದಿಗಾರರಿಗೆ ತಿಳಿಸಿದರು.

‘ಅವರ ಕುಟುಂಬದ ನೋವನ್ನು ಹೇಳಲು ಸಾಧ್ಯವಾಗದು. ನಮ್ಮ ಭಾಗದಲ್ಲಿ ಭಯೋತ್ಪಾದಕರ ದಾಳಿಯಿಂದ ಹತ್ಯೆ ಆದ ಅಪರೂಪಕ ಪ್ರಕರಣ ಇದಾಗಿದೆ. ನೆಲಮಂಗಲದ ಹರ್ಷ ಆಸ್ಪತ್ರೆಯ ಮಾಲೀಕರಾದ ಶಿವಕುಮಾರ್ ಅವರ ಭಾವ ಶಿವಣ್ಣ ಅವರೂ ಪ್ರವಾಸಕ್ಕೆ ತೆರಳಿದ್ದು ಅವರು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಜೊತೆ ನಾನು ಮಾತನಾಡಿದ್ದೇವೆ. ಅವರು ಶ್ರೀಲಂಕಾಕ್ಕೆ ತೆರಳುತ್ತಿದ್ದಾರೆ’ ಎಂದು ಹೇಳಿದರು.

‘ಶಿವಕುಮಾರ್ ಅವರು ಶ್ರೀಲಂಕಾ ಮುಟ್ಟಿದ ನಂತರ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಪೊಲೀಸರು ಈಗಾಗಲೇ ಎಲ್ಲ ಮಾಹಿತಿಯನ್ನು ಕುಟುಂಬದವರಿಂದ ಪಡೆದಿದ್ದಾರೆ. ನಾನು ಮತ್ತೆ ಮನೆಗೆ ಭೇಟಿ ನೀಡುವೆ. ಶ್ರೀಲಂಕಾ ಭಾರತಕ್ಕೆ ಮಿತ್ರ ರಾಷ್ಟ್ರವಾಗಿದೆ. ದೇಹವನ್ನು ತರಲು ಹೆಚ್ಚಿನ ಅಡ್ಡಿಗಳೇನೂ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.