ADVERTISEMENT

ಗೊಲ್ಲರಟ್ಟಿ ಗುಡಿಸಲಲ್ಲಿದ್ದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 20:29 IST
Last Updated 25 ಜುಲೈ 2023, 20:29 IST

ಕೋರ (ತುಮಕೂರು): ಗೊಲ್ಲ ಸಂಪ್ರದಾಯದ ಪ್ರಕಾರ ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದೆ. 

ಶೀತ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಮೂರು ದಿನಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಮರುದಿನವೇ ಮೃತಪಟ್ಟಿದೆ.

ಮಗು ಮೃತಪಟ್ಟ ನಂತರವೂ ತಾಯಿಯನ್ನು ಹಟ್ಟಿಯ ಒಳಗಡೆ ಬಿಟ್ಟುಕೊಂಡಿಲ್ಲ. ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿದೆ.

ADVERTISEMENT

ಗೊಲ್ಲ ಸಮುದಾಯದ ಈ ಮಹಿಳೆ ಕಳೆದ ತಿಂಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಧಿಗೂ ಮುನ್ನ ಜನಿಸಿದ್ದರಿಂದ ಒಂದು ಮಗು ಆಗಲೇ ಮೃತಪಟ್ಟಿತ್ತು. ನಂತರ ಬಾಣಂತಿ ಮತ್ತು ಮತ್ತೊಂದು ಮಗುವನ್ನು ಗ್ರಾಮದ ಹೊರ ವಲಯದ ಗುಡಿಸಲಿನಲ್ಲಿ ಇಡಲಾಗಿತ್ತು.

ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಗುಡಿಸಲಿಗೆ ತೆರಳಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.