ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ದೊಡ್ಡ ಹುಲಿಕಟ್ಟೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ಪ್ರವಹಿಸಿ ರೇಷ್ಮೆ ಕೃಷಿಕ ಅವಿನಾಶ್ (28) ಮೃತಪಟ್ಟಿದ್ದಾರೆ.
ಗಂಗಾಧರಯ್ಯ ಅವರ ಪುತ್ರ ಅವಿನಾಶ್ ಎಂದಿನಂತೆ ರೇಷ್ಮೆ ಹುಳು ಸಾಕಣೆ ಹಾಗೂ ಮನೆ ಸ್ವಚ್ಛಗೊಳಿಸುವಾಗ ವಿದ್ಯುತ್ ಪ್ರವಹಿಸಿದೆ. ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಹುಲಿಯೂರುದುರ್ಗ ಠಾಣೆಗೆ ದೂರು ನೀಡಲಾಗಿದೆ.
ಗ್ರಾಮಸ್ಥರ ಅಸಮಾಧಾನ: ಅವಿನಾಶ್‌ಗೆ ಸಕಾಲದಲ್ಲಿ ತುರ್ತು ಚಿಕಿತ್ಸಾ ವಾಹನ ಮತ್ತು ವೈದ್ಯಕೀಯ ನೆರವು ದೊರೆಯದ ಕಾರಣ ಮೃತಪಟ್ಟಿದ್ದಾನೆ ಎಂದು ಗ್ರಾಮದ ಕೃಷ್ಣೆಗೌಡ, ಚಂದ್ರ, ನಿಂಗರಾಜು, ಕಾರ್ತೀಕ್ ಆರೋಪಿಸಿದ್ದಾರೆ.
ಶನಿವಾರ ಮಧ್ಯಾಹ್ನ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಅವಿನಾಶ್‌ನನ್ನು ಸ್ನೇಹಿತರಾದ ನಿಂಗರಾಜು, ಕಾರ್ತಿಕ್ ಗೌಡ ಬೈಕ್‌ನಲ್ಲಿ ಸಮೀಪದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರು ಸಭೆಗೆ ಹೋಗಿದ್ದು, ದಾದಿಯರು ಇಲ್ಲದೆ, ಅಟೆಂಡರ್ ಮಾತ್ರ ಇದ್ದರು. ಅವರು ಅಸಹಾಯಕನಾಗಿ ಕೈಚೆಲ್ಲಿದಾಗ, ಸ್ನೇಹಿತರ ಕಾರು ಪಡೆದು ಕುಣಿಗಲ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆಗಾಗಿ ‘108’ ಸಂಪರ್ಕ ಮಾಡಲಾಗಿದ್ದು ಅದೂ ತಡವಾಗಿ ಬಂದಿದೆ. ಈ ಭಾಗದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.