ADVERTISEMENT

ಏರಿದ್ದ ಬೆಲೆ ಇಳಿಕೆ: ಮೀನಿನ ಸುಗ್ಗಿ ಆರಂಭ

ಲಾಕ್‌ಡೌನ್‌ ಸಮಯದಲ್ಲಿ ಗಗನಮುಖಿಯಾಗಿದ್ದ ಮೀನಿನ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:31 IST
Last Updated 18 ಆಗಸ್ಟ್ 2020, 19:31 IST
ಬಂಗುಡೆ ಮೀನು
ಬಂಗುಡೆ ಮೀನು   

ತುಮಕೂರು: ಲಾಕ್‌ಡೌನ್‌ ಸಮಯದಲ್ಲಿ ಗಗನಮುಖಿಯಾಗಿದ್ದ ಮೀನಿನ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಇದರಿಂದ ಮತ್ಸ್ಯ ಪ್ರಿಯರಿಗೆ ಮೀನಿನ ಊಟ ಅಗ್ಗವಾದಂತಾಗಿದೆ.

ಕರಾವಳಿಯಲ್ಲಿ ಆಳಸಮುದ್ರದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಮೀನಿಗೆ ಬೆಲೆ ಹೆಚ್ಚಾಗಿತ್ತು. ಲಾಕ್‌ಡೌನ್‌ ಸಮಯದಲ್ಲಿ ಬಂಗುಡೆ ಮೀನಿನ ಬೆಲೆ ಕೆ.ಜಿ.ಗೆ ₹450ರ ವರೆಗೂ ತಲುಪಿತ್ತು.

ಜೂನ್– ಜುಲೈನಲ್ಲಿ ಮೀನುಗಳ ಸಂತಾನೋತ್ಪತ್ತಿ ಸಮಯ. ಈ ಸಮಯದಲ್ಲಿ ಆಳಸಮುದ್ರದ ಮೀನುಗಾರಿಕೆಗೆ ನಿಷೇಧ. ಆದರೆ ಈ ಬಾರಿ ಆಗಸ್ಟ್‌ನಲ್ಲೂ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗಿಲ್ಲ. ಹೀಗಾಗಿ ನಗರಕ್ಕೆ ಕೇರಳ, ಚೆನ್ನೈನಿಂದ ಮೀನು ಪೂರೈಕೆಯಾಗುತ್ತಿದೆ.

ADVERTISEMENT

ಜೂನ್‌, ಜುಲೈನಲ್ಲಿ ಸಮುದ್ರದ ಆಹಾರ ಉತ್ಪನ್ನಗಳ ಬೇಡಿಕೆಯಿಂದಾಗಿ ಬೆಲೆ ಹೆಚ್ಚಾಗುತ್ತದೆ. ಸೆಪ್ಟೆಂಬರ್‌ನಿಂದ ಮಂಗಳೂರು, ಮಲ್ಪೆ ಬಂದರುಗಳಲ್ಲಿ ಮೀನುಗಾರಿಕೆ ಪುನರಾರಂಭ ವಾಗ ಲಿದ್ದು, ಆಗ ಮೀನುಗಳ ಬೆಲೆ ಇನ್ನೂ ಕಡಿಮೆಯಾಗಲಿದೆ ಎನ್ನುತ್ತಾರೆ ನಗರದ ಮತ್ಸ್ಯದರ್ಶಿನಿ ಮಾಲೀಕ ಸಿದ್ದರಾಮಯ್ಯ.

ಬಂಗುಡೆ, ಬೂತಾಯಿ, ಸೀಗಡಿ, ಬಿಳಿ ಮಾಂಜಿ, ಅಂಜಲ್‌ ಮೀನಿಗೆ ಬೇಡಿಕೆ ಇದೆ. ಲಾಕ್‌ಡೌನ್‌ ಸಮಯದಲ್ಲಿ ಮೀನು ಮಾರಾಟ ಬಂದ್‌ ಮಾಡಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆ ನಂತರವೂ ಮೀನು ವ್ಯಾಪಾರ ಕಡಿಮೆಯೇ ಇತ್ತು. ಇದೀಗ ಚೇತರಿಸಿಕೊಂಡಿದೆ ಎನ್ನುತ್ತಾರೆ.

ಹಸಿ ಮೀನು ಹೆಚ್ಚು ಪೂರೈಕೆಯಾಗದ ಸಮಯದಲ್ಲಿ ಒಣ ಮೀನಿಗೆ ಬೇಡಿಕೆ ಬರುತ್ತದೆ. ಸೀಗಡಿ, ಬಂಗುಡೆ, ಸಾರ್ಕ್‌, ಕೊಲ್ಲತರು, ನಂಗ್‌ನಂತರ ಒಣ ಮೀನಿಗೆ ಬೇಡಿಕೆ ಇದೆ. ಹೆಚ್ಚು ದಿನ ಇಟ್ಟು ಬಳಸಬಹುದು ಎಂಬ ಲೆಕ್ಕಾಚಾರದಲ್ಲಿ ಗ್ರಾಹಕರು ಖರೀದಿಸುತ್ತಾರೆ.

ಸೆಪ್ಟೆಂಬರ್‌ನಿಂದ ಇನ್ನೂ ಕಡಿಮೆಯಾಗುವ ನಿರೀಕ್ಷೆ

‘ಇದೇ ಮೊದಲ ಬಾರಿಗೆ ಬಂಗುಡೆ ಮೀನಿನ ಬೆಲೆ ವಿಪರೀತ ಹೆಚ್ಚಳವಾಗಿದೆ. ಈ ಹಿಂದೆ ಯಾವತ್ತೂ ಒಂದು ಕೆ.ಜಿ.ಗೆ ₹300 ದಾಟಿದ ಉದಾರಹಣೆ ಇಲ್ಲ. ಆದರೆ ಈ ಬಾರಿ ಲಾಕ್‌ಡೌನ್‌ ಸಮಯದಲ್ಲಿ ಬಂಗುಡೆಗೆ ₹450ರ ವರೆಗೆ ಏರಿಕೆಯಾತ್ತು. ಸೆಪ್ಟೆಂಬರ್‌ನಿಂದ ಮೀನುಗಾರಿಕೆ ಆರಂಭವಾಗಿ ಒಂದು ವಾರದ ಬಳಿಕ ಎಲ್ಲ ಮೀನುಗಳ ಬೆಲೆ ಕಡಿಮೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೀನಿನ ವ್ಯಾಪಾರ ಬಹಳ ಕಡಿಮೆ ಇದೆ ಎನ್ನುತ್ತಾರೆ ಮತ್ಸ್ಯದರ್ಶಿನಿ ಮಾಲೀಕ ಸಿದ್ದರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.