ತುಮಕೂರಿನಲ್ಲಿ ಬುಧವಾರ ‘ಇಂಡಿಯಾ’ ಮೈತ್ರಿ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು. ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಯರಾಮಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ,
ತುಮಕೂರು: ‘ಪುಲ್ವಾಮಾ ದಾಳಿಯಲ್ಲಿ ದೇಶದ ಸೈನಿಕರನ್ನು ಬಲಿ ಕೊಟ್ಟು ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ತೊಲಗಬೇಕು. ಸರ್ವಾಧಿಕಾರಿ, ಕೋಮುವಾದಿ ಬಿಜೆಪಿ ಸೋಲಿಸುವುದು ಅನಿವಾರ್ಯ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದಲ್ಲಿ ಬುಧವಾರ ಸಿಪಿಐ ಹಮ್ಮಿಕೊಂಡಿದ್ದ ‘ಬಿಜೆಪಿ ಸೋಲಿಸಿ, ದೇಶ ಉಳಿಸಿ’ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದವರು ಚುನಾವಣಾ ಬಾಂಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿಗಳನ್ನು ಶತಕೋಟಿ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಹೇಳುವ ಪ್ರಧಾನಿ ಮೋದಿ ಅವರು ‘ಅದಾನಿ, ಅಂಬಾನಿ ವಿಕಾಸ್ ಮತ್ತು ಬಡವರ ವಿನಾಶ್’ ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿಗೆ ಮತ ನೀಡಬೇಕಾ? ಎಂದು ಪ್ರಶ್ನಿಸಿದರು.
ಮುಸ್ಲಿಮರು ಪ್ರತಿ ದಿನ ನಾವು ದೇಶ ಪ್ರೇಮಿಗಳು ಎಂದು ಸಾಬೀತು ಪಡಿಸಬೇಕಾಗಿದೆ. ಕುರಿ ಮಾಂಸವನ್ನು ದನದ ಮಾಂಸ ಎಂದು ಬಿಂಬಿಸಿ ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದಲಿತರು, ಮಹಿಳೆಯರು, ಆದಿವಾಸಿಗಳು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸಂವಿಧಾನ, ಬಹುತ್ವ ಭಾರತ ಉಳಿಸಿಕೊಳ್ಳಬೇಕು. ಈ ಚುನಾವಣೆಯಲ್ಲಿ ಯಾರೂ ಮೈ ಮರೆಯಬಾರದು ಎಂದು ಎಚ್ಚರಿಸಿದರು.
ಎಲ್ಲರು ಈ ಚುನಾವಣೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಸೋಲಿಸದಿದ್ದರೆ ಮತ್ತೊಮ್ಮೆ ಮತ ಹಾಕಲು ನಮಗೆ ಅವಕಾಶ ಸಿಗುವುದಿಲ್ಲ. ನಮ್ಮದೇ ಸರ್ವಾಧಿಕಾರ ಎಂದು ಮತ್ತೊಮ್ಮೆ ಚುನಾವಣೆಯೇ ಮಾಡುವುದಿಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ‘ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸಂಸದರ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ಜಂಟಿ ಸದನ ಉದ್ದೇಶಿಸಿ ಒಮ್ಮೆ ಮಾತನಾಡುತ್ತಾರೆ. ವಿರೋಧ ಪಕ್ಷಗಳನ್ನು ಟೀಕಿಸುವುದು ಬಿಟ್ಟರೆ, ಸದನದ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಎಲ್ಲದಕ್ಕೂ ತಿಪ್ಪೆ ಸಾರುವ ಕೆಲಸ ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಯರಾಮಯ್ಯ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಸಿಪಿಐ ರಾಜ್ಯ ಕಾರ್ಯದರ್ಶಿ ಅಮ್ಜದ್, ಜಿಲ್ಲಾ ಕಾರ್ಯದರ್ಶಿ ಗಿರೀಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಕಂಬೇಗೌಡ, ಉಮಾದೇವಿ, ಪುಷ್ಪಲತಾ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.