ತುಮಕೂರಿನ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಬುಧವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಅಧಿಕಾರಿ ಕೆ.ತೇಜಾವತಿ ಅವರಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು: ಸಹಾಯಧನ, ಪಿಂಚಣಿ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಬುಧವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಯಿತು.
‘ಕೇಂದ್ರ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಮತ್ತು ಸೆಸ್ ಕಾಯ್ದೆಗಳನ್ನು ನಿಷ್ಕ್ರಿಯ ಮಾಡದೆ ಮುಂದುವರಿಸಬೇಕು. ಕಾರ್ಮಿಕರ ಬದುಕು ರಕ್ಷಿಸಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಳಪೆ ಕಿಟ್ ವಿತರಿಸಿದ್ದು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಸರ್ಕಾರ ತನಿಖೆ ನಡೆಸಬೇಕು’ ಎಂದು ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದರು.
ಕೌಶಲ ತರಬೇತಿ ನೀಡಿ, ಕಿಟ್ ಬದಲು ನೇರ ನಗದು ವರ್ಗಾವಣೆ ಮಾಡಬೇಕು. ಪಾರದರ್ಶಕವಾಗಿ ಆಡಳಿತ ನಡೆಸಬೇಕು. ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಫೆಡರೇಷನ್‌ನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ‘ಶೀಘ್ರವೇ ಪಿಂಚಣಿ ಹಣ ಬಿಡುಗಡೆ ಮಾಡಬೇಕು. ಅರ್ಜಿ ಸಲ್ಲಿಕೆಗೆ ಅಡ್ಡಿಯಾಗುತ್ತಿರುವ ತಾಂತ್ರಿಕ ತೊಂದರೆ ನಿವಾರಿಸಬೇಕು. ವಿವಿಧ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಮನವಿ ಮಾಡಿದರು.
ಫೆಡರೇಷನ್ ಉಪಾಧ್ಯಕ್ಷ ಶಂಕರಪ್ಪ, ‘ಕಲ್ಯಾಣ ಮಂಡಳಿ ಮತ್ತು ಸಲಹಾ ಮಂಡಳಿಯನ್ನು ಪುನರ್ ರಚಿಸಿ ಕೇಂದ್ರ ಕಾರ್ಮಿಕ ಸಂಯೋಜಿತ ಸಂಘಗಳಿಗೆ ಮಾತ್ರವೇ ಪ್ರಾತಿನಿಧ್ಯ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕರ ಸಮಸ್ಯೆ ಸ್ಪಂದಿಸಬೇಕು’ ಎಂದರು.
ಮುಖಂಡರಾದ ಕೊಂಡಪ್ಪ, ಅಶ್ವತ್ಥಪ್ಪ, ಪ್ರಕಾಶ್, ಮೌಲನಾ, ಜಗದೀಶ್, ನಜೀರ್, ವಜ್ರಪ್ಪ ಇತರರು ಹಾಜರಿದ್ದರು. ಕಾರ್ಮಿಕ ಅಧಿಕಾರಿ ಕೆ.ತೇಜಾವತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.