ADVERTISEMENT

ಕಾರ್ಮಿಕರಿಗೆ ಕೊಳೆತ ಮೊಟ್ಟೆ ವಿತರಣೆ: ಗುಣಮಟ್ಟದ ಆಹಾರ ಪೂರೈಕೆಗಿಲ್ಲ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 6:56 IST
Last Updated 23 ಡಿಸೆಂಬರ್ 2023, 6:56 IST
ತುಮಕೂರಿನ ಪೌರ ಕಾರ್ಮಿಕರಿಗೆ ಶುಕ್ರವಾರ ವಿತರಿಸಿರುವ ಕೊಳೆತ ಮೊಟ್ಟೆ
ತುಮಕೂರಿನ ಪೌರ ಕಾರ್ಮಿಕರಿಗೆ ಶುಕ್ರವಾರ ವಿತರಿಸಿರುವ ಕೊಳೆತ ಮೊಟ್ಟೆ   

ತುಮಕೂರು: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಶುಕ್ರವಾರ ಬೆಳಗ್ಗೆ ತಿಂಡಿಯ ಜತೆಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಲಾಗಿದೆ. ಇದರ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

ಪಾಲಿಕೆಯ 1ನೇ ವಾರ್ಡ್‌ ವ್ಯಾಪ್ತಿಯ ಶಿರಾ ಗೇಟ್‌ನಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಬೆಳಗಿನ ತಿಂಡಿಯಾಗಿ ಪಲಾವ್‌ ನೀಡಲಾಗಿತ್ತು. ಇದರ ಜತೆಗೆ ಕೊಳೆತ ಮೊಟ್ಟೆ ಕೊಡಲಾಗಿದೆ.

ಈ ಹಿಂದೆ ತಿಂಡಿಯಲ್ಲಿ ಸತ್ತ ಜಿರಳೆ, ಹುಳುಗಳು ಪತ್ತೆಯಾಗಿದ್ದವು. ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ‘ಪೌರ ಕಾರ್ಮಿಕರಿಗೆ ಕೊಳೆತ ಮೊಟ್ಟೆ ಪೂರೈಸಲಾಗುತ್ತಿದೆ. ಗುಣಮಟ್ಟದ ಆಹಾರ ಸಿಗುತ್ತಿಲ್ಲ’ ಎಂದು ಪಾಲಿಕೆಯ ಸದಸ್ಯರು ಸಾಕ್ಷಿ ಸಮೇತ ಆರೋಪಿಸಿದ್ದರು. ‘ಉತ್ತಮ ಆಹಾರದ ವಿತರಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು. ಸಭೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರೂ, ಕೊನೆಗೆ ತೇಪೆ ಸಾರಿಸಿ ಕೈಬಿಟ್ಟರು. ನಿರಂತರವಾಗಿ ಕಳಪೆ ಆಹಾರ ವಿತರಣೆಯಾಗುತ್ತಿದ್ದರೂ ಯಾರ ಮೇಲೂ ಕ್ರಮ ಜರುಗಿಸಿಲ್ಲ. ಹಲವರು ಪಾಲಿಕೆ ನೀಡುವ ಆಹಾರ ಸೇವಿಸುವುದನ್ನು ಬಿಟ್ಟಿದ್ದಾರೆ.

ADVERTISEMENT

ಮಹಾನಗರ ಪಾಲಿಕೆಯಿಂದ ಟೆಂಡರ್‌ ಪಡೆದ ಸಂಸ್ಥೆಯೊಂದು ಪೌರ ಕಾರ್ಮಿಕರಿಗೆ ಆಹಾರ ಪೂರೈಸುತ್ತಿದೆ. ಬೆಳಿಗ್ಗೆ ನೀಡುವ ತಿಂಡಿಯಲ್ಲಿ ರುಚಿ, ಗುಣಮಟ್ಟ ಇರುತ್ತಿಲ್ಲ. ಹಲವು ಕಡೆಗಳಲ್ಲಿ ಕಾರ್ಮಿಕರು ಪಾಲಿಕೆಯಿಂದ ನೀಡುವ ತಿಂಡಿ ತಿನ್ನುತ್ತಿಲ್ಲ. ಕೆಲವರು ಅನಿವಾರ್ಯವಾಗಿ ತಿಂಡಿ ಸೇವಿಸುತ್ತಿದ್ದಾರೆ.

ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಪಾಲಿಕೆಯ ಮೇಯರ್‌, ಆಯುಕ್ತರು ಮಾಡುತ್ತಿಲ್ಲ. ಗಾಢ ನಿದ್ರೆಗೆ ಜಾರಿರುವ ಪಾಲಿಕೆಯ ಆರೋಗ್ಯ ಶಾಖೆಯನ್ನು ಎಚ್ಚರಿಸಬೇಕಾಗಿದೆ. ಪೌರ ಕಾರ್ಮಿಕರ ವಿಷಯದಲ್ಲಿ ಪಾಲಿಕೆ ಆಡಳಿತ ವರ್ಗ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಜಾರಿದೆ. ಇಡೀ ನಗರದ ಸ್ವಚ್ಛತೆಗೆ ಶ್ರಮಿಸುವವರಿಗೆ ಗುಣಮಟ್ಟದ ತಿಂಡಿ ಕೊಡಲು ಆಗುತ್ತಿಲ್ಲ ಎಂದು ಪೌರ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪೌರ ಕಾರ್ಮಿಕರಿಗೆ ಒಳ್ಳೆಯ ತಿಂಡಿ ಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ದಿನಗಳಿಂದ ತಿಂಡಿಯ ಜತೆಗೆ ಮೊಟ್ಟೆ ಕೊಡುತ್ತಿದ್ದಾರೆ. ಆಹಾರದ ಗುಣಮಟ್ಟ ಪರೀಕ್ಷಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಕ್ಯಾಂಟೀನ್‌ ಕಮಿಟಿ ರಚಿಸುವಂತೆ ಈಗಿನ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.