ADVERTISEMENT

ಇ–ಡಿಜಿಟಲ್‌ಗೆ ಜಿಲ್ಲೆಯ ಸಾಹಿತಿಗಳ ಕೃತಿಗಳು

ತುಮಕೂರು ಸ್ಮಾರ್ಟ್‌ಸಿಟಿಯ ಇ–ಗ್ರಂಥಾಲಯ ಯೋಜನೆ

ಡಿ.ಎಂ.ಕುರ್ಕೆ ಪ್ರಶಾಂತ
Published 3 ಡಿಸೆಂಬರ್ 2020, 14:33 IST
Last Updated 3 ಡಿಸೆಂಬರ್ 2020, 14:33 IST
ಬಾ.ಹ.ರಮಾಕುಮಾರಿ
ಬಾ.ಹ.ರಮಾಕುಮಾರಿ   

ತುಮಕೂರು: ಕೆಲವೇ ದಿನಗಳಲ್ಲಿ ಜಿಲ್ಲೆಯ ಸಾಹಿತಿಗಳ ಕೃತಿಗಳು ಇ–ಡಿಜಿಟಲ್‌ಗೆ ಒಳಪಡಲಿವೆ. ಹೌದು, ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಮಹತ್ವದ ಬೆಳೆವಣಿಗೆಗೆ ತುಮಕೂರು ಸ್ಮಾರ್ಟ್‌ಸಿಟಿಯು ನಾಂದಿಯಾಡಿದೆ. ಜಿಲ್ಲೆಯ ಎಲ್ಲ ಲೇಖಕರ ಕೃತಿಗಳನ್ನು ಇ–ಡಿಜಿಟಲ್‌ಗೆ ಒಳಪಡಿಸಲು ಮುಂದಾಗಿದೆ.

ಈಗಾಗಲೇ ಸ್ಮಾರ್ಟ್‌ ಸಿಟಿಯು ತುಮಕೂರಿನ ಟೌನ್‌ಹಾಲ್‌ನ ನಗರ ಕೇಂದ್ರ ಗ್ರಂಥಾಲಯದಲ್ಲಿ ಇ–ಗ್ರಂಥಾಲಯ ರೂಪಿಸಿದೆ. ಈ ಯೋಜನೆಯ ಮುಂದುವರಿದಭಾಗ ಇದಾಗಿದೆ.

ಜಿಲ್ಲೆಯಲ್ಲಿರುವವರು ಮತ್ತು ಜಿಲ್ಲೆಯವರಾಗಿದ್ದು ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಸಾಹಿತಿಗಳು ತಮ್ಮ ಎಲ್ಲ ಪ್ರಕಾರದ ಕೃತಿಗಳನ್ನು ಇ–ಡಿಜಿಟಲ್‌ಗೆ ಒಳಪಡಿಸಬಹುದು. ಇಡೀ ಜಿಲ್ಲೆಯ ಸಾಹಿತಿಗಳ ಕೃತಿಗಳು ಅಂತರ್ಜಾಲದಲ್ಲಿ ದೊರೆಯಬೇಕು ಎನ್ನುವ ಮಹತ್ವದ ಉದ್ದೇಶವನ್ನು ಹೊಂದಿದೆ. ಕೆಲಸ ನಿಮಿತ್ತ ತುಮಕೂರಿನಲ್ಲಿ ವಾಸಿಸುತ್ತಿರುವ ಹೊರ ಜಿಲ್ಲೆಯ ಲೇಖಕರು ಸಹ ಪುಸ್ತಕಗಳನ್ನು ಇ–ಡಿಜಿಟಲ್‌ಗೆ ಒಳಪಡಿಸಬಹುದು.

ADVERTISEMENT

ಸಾಹಿತಿಗಳು, ಪ್ರಕಾಶಕರು ಪುಸ್ತಕಗಳನ್ನು ಡಿ. 15ರ ಒಳಗೆ ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕರಿಗೆ ಸಲ್ಲಿಸಬೇಕು. ‍ಪುಸ್ತಕ ಸಲ್ಲಿಸಲು ಯಾವುದೇ ವಯೋಮಾನದ ನಿರ್ಬಂಧಗಳು ಇಲ್ಲ. ಹೀಗೆ ಸಲ್ಲಿಕೆಯಾದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ನಂತರ ಈ ಕೃತಿಗಳು ಇ–ಡಿಜಿಟಲ್ ರೂಪು ಪಡೆಯುತ್ತವೆ.

ಇ–ಡಿಜಿಟಲ್‌ನಿಂದ ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳಲ್ಲಿಯೇ ಕುಳಿತು ತುಮಕೂರು ಜಿಲ್ಲೆಯ ಸಾಹಿತಿಗಳ ಕೃತಿಗಳನ್ನು ಓದಬಹುದು. ಇದು ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿನ ಮಹತ್ವದ ಹೆಜ್ಜೆಯಾಗಿದೆ ಎನ್ನುವ ಅಭಿಪ್ರಾಯ ಸಾಹಿತ್ಯವಲಯದಲ್ಲಿ ಕೇಳಿ ಬರುತ್ತಿದೆ.

‘ಇ–ಗ್ರಂಥಾಲಯ ರೂಪಿಸಿ ನಾವು ಜಿಲ್ಲೆಯವರಿಗೆ ಅವಕಾಶ ನೀಡಲಿಲ್ಲ ಎಂದರೆ ಹೇಗೆ. ಮೃತಪಟ್ಟಿರುವ ಲೇಖಕರ ಕೃತಿಗಳು ಮತ್ತು ಹಕ್ಕುಸ್ವಾಮ್ಯದ ಪತ್ರವನ್ನು ಕೊಟ್ಟರೆ ಅವುಗಳನ್ನೂ ಇ–ಡಿಜಿಟಲ್‌ಗೆ ಒಳಪಡಿಸಲಾಗುವುದು’ ಎಂದು ಸ್ಮಾರ್ಟ್‌ ಸಿಟಿ ಎಂಜಿನಿಯರ್ ಸ್ಮಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ ಎಷ್ಟು ಮಂದಿಯಾದರೂ ಪುಸ್ತಕಗಳನ್ನು ಸಲ್ಲಿಸಬಹುದು. ಕಥೆ, ಕವನ ಹೀಗೆ ಇಂತಹದ್ದೇ ಕೃತಿಗಳನ್ನು ಮಾತ್ರ ಸಲ್ಲಿಸಬೇಕು ಎಂದೇನೂ ಇಲ್ಲ. ಒಬ್ಬ ಲೇಖಕರು 100 ಪುಸ್ತಕ ಬರೆದಿದ್ದರೆ, ಅವೆಲ್ಲವೂ ಇ–ಗ್ರಂಥಾಲಯದಲ್ಲಿ ಇರಬೇಕು ಎನಿಸಿದರೆ ಎಲ್ಲವನ್ನೂ ಸಲ್ಲಿಸಬಹುದು’ ಎಂದು
ಹೇಳಿದರು.

‘ಹಂತ ಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಮೊದಲ ಹಂತದಲ್ಲಿ ಡಿ.5ರ ಒಳಗೆ ಪುಸ್ತಕಗಳನ್ನು ಸಲ್ಲಿಸಬೇಕು. 5ರ ನಂತರ ಸ್ಥಳೀಯವಾದ ಸಮಿತಿ ರಚಿಸಲಾಗುತ್ತದೆ. ಸಾಹಿತಿಗಳ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲು ಸಹ ಯೋಚಿಸಿದ್ದೇವೆ. ಹೆಚ್ಚಿನ ವಿಚಾರಗಳ ಬಗ್ಗೆ ಮುಂದೆ ಚರ್ಚಿಸಲಿದ್ದೇವೆ’ ಎಂದು ಹೇಳಿದರು.

‘ಇ–ಡಿಜಿಟಲ್’ ಯೋಜನೆಯ ಕುರಿತು ರೂಪುರೇಷೆಗಳನ್ನು ಚರ್ಚಿಸಲು ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಜಿಲ್ಲೆಯ ಸಾಹಿತಿಗಳು ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆ ಸಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.