ADVERTISEMENT

ಮಧುಗಿರಿ: ಸಿದ್ದಾಪುರ ಕೆರೆಯಲ್ಲಿ ನೀರು ಖಾಲಿ, ಜನರ ಪರದಾಟ

ಟಿ.ಪ್ರಸನ್ನಕುಮಾರ್
Published 26 ಫೆಬ್ರುವರಿ 2024, 6:56 IST
Last Updated 26 ಫೆಬ್ರುವರಿ 2024, 6:56 IST
ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆ ಬರಿದಾಗಿರುವುದು
ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆ ಬರಿದಾಗಿರುವುದು   

ಮಧುಗಿರಿ: ಪಟ್ಟಣದ ಜನರಿಗೆ ನೀರು ಪೂರೈಸುತ್ತಿರುವ ಸಿದ್ದಾಪುರ ಕೆರೆ ನೀರು ಖಾಲಿಯಾಗಿ ಕುಡಿಯುವ ನೀರಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗದೇ ಇರುವುದರಿಂದ ಹಾಗೂ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಬಾರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆಯಲ್ಲಿ ಪಟ್ಟಣದ ಜನರು ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಿಸಲು ಸಜ್ಜಾಗಬೇಕಿದೆ. ಜಾನುವಾರು, ಕುರಿ, ಮೇಕೆ, ಕಾಡು ಪ್ರಾಣಿಗಳಿಗೂ ನೀರಿನ ಸಮಸ್ಯೆ ಉಂಟಾಗಿದೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನೀರಿಗಾಗಿ ಕೊಳವೆ ಬಾವಿ, ಬಾವಿಗಳು ಮತ್ತು ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯ ಪ್ರಾರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಮುಂದೆ ಹೇಗೋ ಎನ್ನುವ ಆತಂಕ ಜನರಲ್ಲಿ ಕಾಡತೊಡಗಿದೆ.

ADVERTISEMENT

ಮಧುಗಿರಿ ಚೋಳೇನಳ್ಳಿ ಕೆರೆ ಮತ್ತು ಪಟ್ಟಣದ ವಿವಿಧ ಕಡೆಯಲ್ಲಿ ಕೊರೆಸಿರುವ 76 ಕೊಳವೆ ಬಾವಿಗಳಿಂದ ಸದ್ಯಕ್ಕೆ ನೀರನ್ನು ಪೂರೈಸಲಾಗುತ್ತಿದೆ. ಆದರೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.

ಪುರಸಭೆ ನಿಯಮದ ಪ್ರಕಾರ ಒಬ್ಬ ಮನುಷ್ಯನಿಗೆ ಪ್ರತಿನಿತ್ಯ 135 ಲೀಟರ್ ನೀರು ಪೂರೈಸಬೇಕು. ಆದರೆ 70 ಲೀಟರ್ ನೀರು ನೀಡಲು ಸಾಧ್ಯವಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಹೇಳಿದರು.

ಉಳ್ಳವರು ಮನೆಯ ಸಂಪ್‌ಗಳಿಗೆ ಹಣ ಕೊಟ್ಟು ಟ್ಯಾಂಕರ್ ನೀರನ್ನು ಬಿಡಿಸಿಕೊಳ್ಳುತ್ತಾರೆ. ಆದರೆ ಬಡವರ ಪಾಡಂತೂ ಹೇಳತೀರದಾಗಿದೆ. ಪ್ರತಿನಿತ್ಯ ನೀರಿಗಾಗಿ ಕಾಯುವುದು ಹಾಗೂ ಪರದಾಡುವುದು ಕೆಲವು ವಾರ್ಡ್‌ನ ನಿವಾಸಿಗಳಿಗೆ ಸಾಮಾನ್ಯವಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿಗಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಆವರಣದಲ್ಲಿದ್ದ ಎರಡು ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಆಸ್ಪತ್ರೆ ಸ್ವಚ್ಛತೆ ಮತ್ತು ಶೌಚಾಲಯ ಹಾಗೂ ಡಯಾಲಿಸಿಸ್ ಕೇಂದ್ರಕ್ಕೆ ನೀರಿನ ಅವಶ್ಯಕತೆ ಇದೆ. ಕೊಳವೆ ಬಾವಿಯಿಂದ ಬರುವ ನೀರು ಸಾಕಾಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರನ್ನು ಬಿಡಿಸಿಕೊಂಡು ನಿಭಾಯಿಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಗಂಗಾಧರ್ ತಿಳಿಸಿದರು.

ಬುಗಡನಹಳ್ಳಿ ಜಲ ಸಂಗ್ರಹಾಗಾರದಿಂದ ಹೇಮಾವತಿ ನೀರು ಮಧುಗಿರಿ ಸಿದ್ದಾಪುರ ಕೆರೆಗೆ ನೀರು ಬಂದಿದ್ದರೆ, ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ತಿಳಿಯಾಗುತ್ತಿತ್ತು. ಆದರೆ ಬುಗಡನಹಳ್ಳಿಯ ಮಧುಗಿರಿ ಪಂಪ್‌ಹೌಸ್‌ನಲ್ಲಿದ್ದ ಸ್ಟಾಟರ್ ಮತ್ತು ಟ್ರಾನ್ಸ್‌ಫಾರ್ಮರ್ ಕೈ ಕೊಟ್ಟಿದ್ದರಿಂದ ಹೇಮಾವತಿ ನೀರು ಹರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಸ್ಟಾರ್ಟರ್ ಮತ್ತು ನೂತನ ಟ್ರಾನ್ಸ್‌ಫಾರ್ಮರನ್ನು ಅಳವಡಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಸಿದ್ದಾಪುರ ಕೆರೆ ನೀರು ಹರಿಸಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ನೀರಿನ ಸಮಸ್ಯೆ ಕಾಡತೊಡಗಿದೆ ಎಂದು ದಂಡೂರು ಬಾಗಿಲು ನಿವಾಸಿ ನಾಗಣ್ಣ ಹೇಳಿದರು. ತಾಲ್ಲೂಕಿನಲ್ಲಿ ಈ ಬಾರಿ ಮಳೆ ಇಲ್ಲದೇ ಕುಡಿಯುವ ನೀರಿಗೆ ತೊಂದರೆಯಾಗಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಿದರೆ, ಪಟ್ಟಣದಲ್ಲಿ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ದೂರ ಮಾಡಬಹುದು ಎನ್ನುತ್ತಾರೆ 16ನೇ ವಾರ್ಡ್‌ ನಿವಾಸಿ ಚಲಪತಿ.

ಬುಗಡನಹಳ್ಳಿಯ ಮಧುಗಿರಿ ಪಂಪ್ ಹೌಸ್ ನಲ್ಲಿದ್ದ ಸ್ಟಾಟರ್ ಸರಿಪಡಿಸುತ್ತಿರುವುದು
ಬುಗಡನಹಳ್ಳಿಯ ಜಲ ಸಂಗ್ರಹಾಗಾರದ ಮಧುಗಿರಿ ಪಂಪ್‌ಹೌಸ್‌ನಲ್ಲಿದ್ದ ಸ್ಟಾಟರ್ ಸಮಸ್ಯೆಯಾಗಿತ್ತು. ಅದನ್ನು ಹೊಸದಾಗಿ ಟೆಂಡರ್‌ ಕರೆದು ಆ ಕೆಲಸ ಪೂರ್ಣಗೊಂಡಿದೆ. ನೂತನ ಟ್ರಾನ್ಸ್‌ಫಾರ್ಮರನ್ನು ಅಳವಡಿಸಲಾಗಿದೆ. ಇನ್ನು 14 ದಿನಗಳಲ್ಲಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು. ಪಟ್ಟಣ ಮತ್ತು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎದುರಾದರೆ ಕೊಳವೆ ಬಾವಿಯನ್ನು ಕೊರೆದು ನೀರು ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
–ಕೆ.ಎನ್.ರಾಜಣ್ಣ ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.