ADVERTISEMENT

ಶಿರಾ: 9ವರ್ಷದಿಂದ ಹನಿ ನೀರೂ ಹರಿದಿಲ್ಲ!

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 3:50 IST
Last Updated 25 ಆಗಸ್ಟ್ 2025, 3:50 IST

ಶಿರಾ ತಾಲ್ಲೂಕಿನ ಯಲಿಯೂರು ಕೆರೆ ಬಳಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ

ಶಿರಾ ತಾಲ್ಲೂಕಿನ ಯಲಿಯೂರು ಕೆರೆ ಬಳಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ

ಶಿರಾ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಇದುವರೆಗೂ ಜನರಿಗೆ ಒಂದು ಹನಿ ನೀರು ನೀಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಯಿಂದ ಉದ್ಘಾಟನೆಗೊಂಡಿದ್ದರು ಸಹ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ADVERTISEMENT

ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ 22 ಗ್ರಾಮಗಳಿಗೆ ₹6.10 ಕೋಟಿ ವೆಚ್ಚದಲ್ಲಿ, ಯಲಿಯೂರು ಕೆರೆಯಿಂದ 23 ಗ್ರಾಮಗಳಿಗೆ ₹4.60 ಕೋಟಿ ವೆಚ್ಚದಲ್ಲಿ ಹಾಗೂ ಶಿರಾ ದೊಡ್ಡ ಕೆರೆಯಿಂದ ತಾವರೆಕೆರೆ ಸೇರಿದಂತೆ 64 ಗ್ರಾಮಗಳಿಗೆ ₹15.35 ಕೋಟಿ ವೆಚ್ಚದಲ್ಲಿ ಸೇರಿದಂತೆ ಒಟ್ಟು 109 ಗ್ರಾಮಗಳಿಗೆ ₹26 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಕಾಮಗಾರಿ ಪೂರ್ಣಗೊಂಡು 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿ 9 ವರ್ಷ ಕಳೆದರೂ ಸಹ ಇಲ್ಲಿಯವರೆಗೂ ನೀರು ನೀಡಿಲ್ಲ.

ತಾಲ್ಲೂಕಿನಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು ಸಾವಿರ ಅಡಿ ಕೊಳವೆ ಬಾವಿ ಕೊರೆದರು ನೀರು ಸಿಗುವುದು ಕಷ್ಟವಾಗಿದೆ. ಒಂದು ವೇಳೆ ನೀರು ಸಿಕ್ಕಿದರು ಸಹ ಪ್ಲೋರೈಡ್‌ನಿಂದ ಕೂಡಿದಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕುಡಿಯುವ ನೀರು ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ಮನಗೊಂಡು ಅಂದು ಟಿ.ಬಿ.ಜಯಚಂದ್ರ ಅವರು ರಾಜ್ಯದಲ್ಲಿ ಪ್ರಭಾವಿ ಸಚಿವರಾಗಿದ್ದ ಕಾರಣ ಹೆಚ್ಚು ಅನುದಾನ ತಂದು ಯೋಜನೆಗಳನ್ನು ಪೂರ್ಣಗೊಳಿಸಿದ್ದರು. ಮೂರು ಯೋಜನೆಗಳು ಸಹ ಹೇಮಾವತಿ ನೀರನ್ನು ಅವಲಂಬಿಸಿವೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಟಿ.ಬಿ.ಜಯಚಂದ್ರ ಅವರು ಚುನಾವಣೆಯಲ್ಲಿ ಸೋತ ನಂತರ ಈ ಯೋಜನೆ ಮೂಲೆಗುಂಪಾಯಿತು ಇದರ ಬಗ್ಗೆ ಯಾರು ಸಹ ಗಮನ ಹರಿಸಲಿಲ್ಲ.

ಜೆಜೆಎಂ ಯೋಜನೆಯಲ್ಲಿ ಇದನ್ನು ಬಳಕೆ ಮಾಡಿಕೊಂಡು ನೀರು ನೀಡುವ ಕೆಲಸವನ್ನು ಮಾಡಬಹುದಿತ್ತು. ಆದರೆ ಹೊಸ ಕಾಮಗಾರಿಗಳ ಬಗ್ಗೆ ಉತ್ಸಾಹ ತೋರಿಸುವ ಅಧಿಕಾರಿಗಳಿಗೆ ಈ ಯೋಜನೆ ಕಣ್ಣಮುಂದೆ ಇದ್ದರು ಸಹ ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜೋಡಿಸಿರುವ ಯಂತ್ರಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿದ್ದರೆ ಕೆಲವನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದರೆ ಸಾರ್ವಜನಿಕರ ತೆರಿಗೆ ಹಣಕ್ಕೆ ಕವಡೆ ಕಾಸಿನ ಬೆಲೆ‌ ಇಲ್ಲದಂತಾಗಿದೆ.

ಒಟ್ಟಿನಲ್ಲಿ ಕುಡಿಯುವ ನೀರನ್ನು ನಂಬಿಕೊಂಡಿರುವ ಈ ಜನರಿಗೆ ನೀರು ಕೊಡುವುದು ಯಾವಾಗ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲದಂತಾಗಿದೆ. ಈಗ ಮತ್ತೆ ಟಿ.ಬಿ.ಜಯಚಂದ್ರ ಶಾಸಕರಾಗಿದ್ದು ಅವರೇ ರೂಪಿಸಿದ ಈ ಯೋಜನೆಯನ್ನು ಸಾಕಾರಗೊಳಿಸುವರೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ.

ಸರ್ಕಾರದ ಜವಾಬ್ದಾರಿ

ಶಿರಾ ತಾಲ್ಲೂಕಿನ 109 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ನೀಡಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಿ ನನ್ನ ಅಧಿಕಾರಾವಧಿಯಲ್ಲಿ ಕಾಮಗಾರಿ ಮುಗಿಸಿ ಪ್ರಾಯೋಗಿಕವಾಗಿ ನೀರು ನೀಡಲಾಯಿತು. ಆದರೆ ಬದಲಾದ ರಾಜಕಾರಣದಲ್ಲಿ ಅಧಿಕಾರಕ್ಕೆ ಬಂದ ಶಾಸಕರು ಈ ಬಗ್ಗೆ ಗಮನ ಹರಿಸಲಿಲ್ಲ. ಈ ಜನರಿಗೆ ಶುದ್ದ ಕುಡಿಯುವ ನೀರು ನೀಡುವುದು ನನ್ನ ಜವಾಬ್ದಾರಿಯಾಗಿದ್ದು ಈ ವರ್ಷ ನೀರು ನೀಡಲಾಗುವುದು.

-ಟಿ.ಬಿ.ಜಯಚಂದ್ರ, ಶಾಸಕ

ಸರ್ಕಾರ ವಿಫಲ

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ ಪ್ರತಿ ಗ್ರಾಮಕ್ಕೆ ಪೈಪ್‌ಲೈನ್ ಮಾಡಲಾಗಿದೆ. ಯೋಜನೆ ಪೂರ್ಣವಾಗಿ 9 ವರ್ಷ ಕಳೆದರೂ ನೀರು ನೀಡಲು ಸರ್ಕಾರ ವಿಫಲವಾಗಿದೆ. ಹಿಂದೆ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದ ಸಮಯದಲ್ಲಿ ಯೋಜನೆ ರೂಪಿಸಲಾಗಿದ್ದು ಈಗ ಮತ್ತೆ ಅವರೇ ಶಾಸಕರಾಗಿದ್ದು ರಾಜ್ಯದಲ್ಲಿ ಸಹ ಅವರದೇ ಸರ್ಕಾರ ಇದೆ. ಈಗಲಾದರೂ ಜನತೆಗೆ ಶುದ್ಧ ಕುಡಿಯುವ ನೀರು ನೀಡಲಿ.

-ಎಲ್.ಟಿ.ಶ್ರೀನಿವಾಸ ನಾಯ್ಕ, ಎಮ್ಮೇರಹಳ್ಳಿ ತಾಂಡ

ಅನುಷ್ಠಾನಕ್ಕೆ‌ ಶಾಸಕ ಮುಂದಾಗಲಿ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಾಸಕ‌ ಟಿ.ಬಿ.ಜಯಚಂದ್ರ ಅವರ ಕನಸಿನ‌ ಕೂಸು. ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರು ನೀಡಲು ಶಾಸಕರು ಯೋಜನೆ ರೂಪಿಸಿದ್ದರು. ಈಗ ಅವರೇ ಅಧಿಕಾರದಲ್ಲಿ ಇರುವುದರಿಂದ ಯೋಜನೆಯ ಅನುಷ್ಠಾನಕ್ಕೆ‌ ಶಾಸಕರು ಮುಂದಾಗಬೇಕಿದೆ.

-ಜಿ.ಶಿವಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ತಾವರೆಕೆರೆ

ಅವೈಜ್ಞಾನಿಕ ಯೋಜನೆ

ಬಹುಗ್ರಾಮ ಕುಡಿಯುವ ಯೋಜನೆ ಅವೈಜ್ಞಾನಿಕವಾಗಿದ್ದು ಇದುವರೆಗೂ ಯಾವುದೇ ಹಳ್ಳಿಗೆ ನೀರು ನೀಡಿದ ಉದಾಹರಣೆ ಇಲ್ಲ. ಕಾಮಗಾರಿಯ ಗುಣಮಟ್ಟ ಯಾವರೀತಿ ಇದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಉಪವಿಭಾಗಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಇದು ಒಂದು ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುವ ಯೋಜನೆಯಾಗಿದೆ.

-ಧನಂಜಯಾರಾಧ್ಯ, ರೈತ ಸಂಘದ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.