ADVERTISEMENT

ಅಲ್ಪಾವಧಿ ಟೆಂಡರ್ ಕರೆದು ನೀರು ಕೊಡಿ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ; ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 16:56 IST
Last Updated 24 ಏಪ್ರಿಲ್ 2019, 16:56 IST

ತುಮಕೂರು: ‘ಬರಗಾಲ ಇರುವುದರಿಂದ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿ ಕೊರೆಸಲು ತುರ್ತಾಗಿ ಅಲ್ವಾವಧಿ ಟೆಂಡರ್ ಕರೆದು ಕೊಳವೆ ಬಾವಿ ಕೊರೆಸಿ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚಿಸಿದರು.

ಬುಧವಾರ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕಿಗೆ ಭೇಟಿ ನೀಡಿದ ಬಳಿಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮತ್ತು ಕುಡಿಯುವ ನೀರು ಪೂರೈಕೆ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನೀತಿ ಸಂಹಿತೆ ಇದ್ದರೂ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಟೆಂಡರ್ ಕರೆಯಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಟೆಂಡರ್ ಪ್ರಕ್ರಿಯೆಯನ್ನೆ ದೊಡ್ಡ ಗೊಂದಲವಾಗಿಸಿ ವ್ಯರ್ಥ ಕಾಲಾಹರಣ ಮಾಡಬಾರದು. ತುರ್ತಾಗಿ ಅಲ್ಪಾವಧಿ ಟೆಂಡರ್ ಕರೆಯಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಿ. ಈಗಲೇ ಪ್ರಕ್ರಿಯೆ ಆರಂಭಿಸಿದರೆ ಮೇ 5 ಅಥವಾ 6ರ ಒಳಗೆ ಪ್ರಕ್ರಿಯೆ ಪೂರ್ಣಗೊಂಡು ಬೇಗ ಕೊಳವೆ ಬಾವಿ ಕೊರೆಸಲು ಅವಕಾಶ ಸಿಗುತ್ತದೆ ಎಂದು ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಡೆಯಿಂದ ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲು ಅಗತ್ಯವಿದೆಯೊ ಎಂಬುದರ ಪಟ್ಟಿ ಪಡೆಯಿರಿ. ಜಿಲ್ಲೆಯಲ್ಲಿ 348 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಹೇಳುತ್ತೀರಿ. ಟೆಂಡರ್ ಹೆಸರು ಹೇಳಿಕೊಂಡು ಕಾಲಾಹರಣ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲೆಯ 74 ಗ್ರಾಮ ಪಂಚಾಯಿತಿಯಲ್ಲಿ 125 ಗ್ರಾಮಗಳಿಗೆ 449 ಟ್ರಿಪ್ ಟ್ಯಾಂಕರ್ ನೀರು ಪೂರೈಸಲಾಗಿದೆ. ನೀರು ಪೂರೈಕೆಗೆ ಈಗಾಗಲೇ 495 ಕೊಳವೆ ಬಾವಿ ಕೊರೆದಿದ್ದು, 308 ಸಫಲವಾಗಿವೆ. 187 ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾಹಿತಿ ನೀಡಿದರು.

ಮಧುಗಿರಿ ತಾಲ್ಲೂಕಿನಲ್ಲಿ 35, ಪಾವಗಡ ತಾಲ್ಲೂಕಿನಲ್ಲಿ 56, ತುಮಕೂರು ತಾಲ್ಲೂಕಿನಲ್ಲಿ 48, ಕೊರಟಗೆರೆಯಲ್ಲಿ 12 ಕೊಳವೆ ಬಾವಿ ವಿಫಲವಾಗಿವೆ ಎಂದು ವಿವರಿಸಿದರು.

ಪಾವಗಡ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ 2003ರಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಸಾಮರ್ಥ್ಯ ಕಳೆದುಕೊಂಡಿವೆ. ದುರಸ್ತಿ ಪಡಿಸಿದರೂ ಕೆಲಸ ಮಾಡದ ಸ್ಥಿತಿಯಲ್ಲಿವೆ. ಪಾವಗಡ ತಾಲ್ಲೂಕಿನಲ್ಲಿ 20, ಮಧುಗಿರಿ ತಾಲ್ಲೂಕಿನಲ್ಲಿ ಇಂತಹ 6 ಘಟಕ ಇವೆ.ದುರಸ್ತಿಗಿಂತ ಇಂತಹ ಕಡೆ ಹೊಸ ಘಟಕ ನಿರ್ಮಾಣ ಅಗತ್ಯವಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್‌ಗಳು ವಿವರಿಸಿದರು.

ಅಧಿಕಾರಿಗಳು ಉತ್ಸಾಹ ತೋರಲಿ:ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಮಿತಿ ಇಲ್ಲ. ರಾಯಚೂರು ಜಿಲ್ಲೆ ಕೇವಲ 5 ತಾಲ್ಲೂಕುಗಳಿರುವ ಚಿಕ್ಕ ಜಿಲ್ಲೆ. ಅಲ್ಲಿ 1 ಕೋಟಿ ಮಾನವ ದಿನ ಸೃಷ್ಟಿಸಿದ್ದಾರೆ. ಹೀಗಾಗಿ, 11 ತಾಲ್ಲೂಕುಗಳಿರುವ ಈ ಜಿಲ್ಲೆಯಲ್ಲಿ ಹೆಚ್ಚು ಮಾನವ ದಿನ ಸೃಷ್ಟಿಸಿ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಬೇಕು. ರೈತರಿಗೆ ವೈಯಕ್ತಿಕ ಲಾಭವಾಗುವಂತಹ, ಸ್ವಸಹಾಯ ಗುಂಪುಗಳ ಚಟುವಟಿಕೆ, ಸರ್ಕಾರಿ ಜಮೀನು ಇರುವ ಕಡೆ ಒಕ್ಕೂಟಗಳಿಗೆ ಹಣ್ಣು, ಹೂ ಬೆಳೆದು ಉದ್ಯೋಗ ಸೃಷ್ಟಿಗೆ ಪೂರಕ ಚಟುವಟಿಕೆ ಪ್ರೋತ್ಸಾಹಿಸಬಹುದು. ಕೆರೆ, ಗ್ರಾಮ ಸ್ವಚ್ಛತೆ, ಗಿಡ ಕಂಟೆ ಕಡಿಯುವುದು ಏನೆಲ್ಲ ಕಾಮಗಾರಿ ಕೈಗೊಳ್ಳಲು ಸಾಧ್ಯವಿದೆ. ಆಸಕ್ತಿಯಿಂದ ಕೆಲಸ ಮಾಡಿ ಎಂದು ಹೇಳಿದರು.

ಮೇವು ವಿತರಿಸಿ: ಬರಗಾಲ ಸಂದರ್ಭದಲ್ಲಿ ದನಕರುಗಳಿಗೆ ಮೇವು, ನೀರಿನ ಕೊರತೆ ಆಗದ ರೀತಿ ಎಚ್ಚರಿಕೆ ವಹಿಸಬೇಕು. ರೈತರ ಬೇಡಿಕೆ ಪರಿಗಣಿಸಿ ಅಗತ್ಯಕ್ಕೆ ಅನುಗುಣವಾಗಿ ಮೇವು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.