ADVERTISEMENT

ಮಧುಗಿರಿ | ಅಡ್ಡಾದಿಡ್ಡಿ ಸಂಚಾರ: ಪಾದಚಾರಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಮೇ 2024, 8:28 IST
Last Updated 20 ಮೇ 2024, 8:28 IST
ಮಧುಗಿರಿಯಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ
ಮಧುಗಿರಿಯಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ   

ಮಧುಗಿರಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ ಹಾಗೂ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದಾಗಿ ಸಂಚಾರ ನಿಯಮಗಳು ಮರೀಚಿಕೆಯಾಗಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪೊಲೀಸರ ತಾತ್ಸಾರವೇ ಕಾರಣ. ಕಿರಿದಾದ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ಸಾವಿರಾರು ಮಂದಿ ವಾಹನಗಳಲ್ಲಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಅವರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲ. ಪಾದಚಾರಿ ಮಾರ್ಗವನ್ನು ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡರೆ, ಕೆಲವೆಡೆ ವಾಹನ ನಿಲುಗಡೆ ಸ್ಥಳವನ್ನೂ ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

ADVERTISEMENT

ಪಟ್ಟಣದ ಕೆ.ಎಚ್. ರಸ್ತೆ, ಎಚ್.ಎಸ್. ರಸ್ತೆ, ಪುರಸಭೆ ಮುಂಭಾಗದ ರಸ್ತೆ ಹಾಗೂ ಡೂಂ ಲೈಟ್ ವೃತ್ತದಲ್ಲಿ ಬೆಸಸಂಖ್ಯೆ ಬರುವ ದಿನಾಂಕದಂದು ಒಂದು ಕಡೆ ಪಾರ್ಕಿಂಗ್ ಹಾಗೂ ಸರಿಸಂಖ್ಯೆ ದಿನಾಂಕದಂದು ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಹಿಂದೆ ಪೊಲೀಸರು ಮಾಡಿದ್ದರು. ಆದರೆ ವರ್ಷಗಳು ಕಳೆದಂತೆ ನಿಯಮಗಳನ್ನು ಸವಾರರು ಗಾಳಿಗೆ ತೂರಿ ಮನಬಂದಂತೆ ವಾಹನ ನಿಲುಗಡೆ ಮಾಡುತ್ತಿದ್ದಾರೆ.

ಪಟ್ಟಣದ ಪ್ರಮುಖ ವೃತ್ತಗಳಾದ ತುಮಕೂರು ಗೇಟ್, ಟಿವಿವಿ ವೃತ್ತ, ತಾಲ್ಲೂಕು ಕಚೇರಿ, ಖಾಸಗಿ ಬಸ್ ನಿಲ್ದಾಣ, ಶಿರಾ ಗೇಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಸಂಚಾರ ರಸ್ತೆಯೇ ಇಲ್ಲದಂತಾಗಿ ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸುವಂತಾಗಿದೆ.

ಪಟ್ಟಣದ ಎಚ್.ಎಸ್.ರಸ್ತೆಯಲ್ಲಿ ಬ್ಯಾಂಕ್‌ಗಳು ಇರುವುದರಿಂದ ನಿತ್ಯ ನೂರಾರು ಗ್ರಾಹಕರು ಅವರ ಕೆಲಸ ಕಾರ್ಯಗಳಿಗಾಗಿ ಬ್ಯಾಂಕ್‌ಗಳಿಗೆ ತೆರಳುತ್ತಾರೆ. ಬ್ಯಾಂಕ್ ಮುಂಭಾಗ ವಾಹನಗಳನ್ನು ಅಡ್ಡಲಾಗಿ ನಿಲುಗಡೆ ಮಾಡುವುದರಿಂದ ವೃದ್ಧರು, ಮಹಿಳೆಯರ ಮುಕ್ತ ಸಂಚಾರಕ್ಕೆ  ತೊಂದರೆಯಾಗುತ್ತಿದೆ.

ಶಾಲಾ - ಕಾಲೇಜು ಆರಂಭ ಹಾಗೂ ಬಿಡುವ ಸಮಯದಲ್ಲಿ ಕೆಲ ಯುವಕರು ನಿಯಮ ಮೀರಿ ಭಾರಿ ಶಬ್ಧಗಳೊಂದಿಗೆ ಬೈಕ್‌ಗಳಲ್ಲಿ ತೆರಳುತ್ತಾರೆ. ಬೈಕ್‌ ಸವಾರರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಬಹುತೇಕ ಅಂಗಡಿ ಹಾಗೂ ಮನೆ ಮಾಲೀಕರು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳಿಗೆ ಮಾರ್ಗವೇ ಇಲ್ಲದಂತಾಗಿದೆ. ಅಂಗಡಿ ಮತ್ತು ಮನೆ ನಿರ್ಮಾಣಕ್ಕೆ ಪುರಸಭೆ ಅಧಿಕಾರಿಗಳು ಪರವಾನಗಿ ನೀಡುವುದಷ್ಟೇ ಕೆಲಸವಾಗಿದೆ. ಆ ಕಟ್ಟಡ ನಿರ್ಮಾಣ ಮಾಡುವಾಗ ರಸ್ತೆ ಮತ್ತು ಚರಂಡಿಗಳು ಒತ್ತುವರಿ ಆಗಿದಿಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಕೆಲ ಅಂಗಡಿ ಮತ್ತು ಮನೆಯ ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಇದೆ.ಸಂಚಾರ ನಿಯಮಗಳ ಪಾಲಿಸಬೇಕು ಎಂಬುದು ಮಾತಿಗೆ ಸೀಮಿತವಾಗಿದೆ. ಆದರೆ ವಾಸ್ತವವಾಗಿ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾಜೇಶ್ ಮಧುಗಿರಿ

ಮಧುಗಿರಿಯಲ್ಲಿ ರಸ್ತೆ ಬದಿ ವಾಹನ ನಿಲುಗಡೆ
ಮಧುಗಿರಿಯಲ್ಲಿ ರಸ್ತೆ ಬದಿ ವಾಹನ ನಿಲುಗಡೆ
ವಾಹನಗಳನ್ನು ಮನಬಂದಂತೆ ಚಾಲನೆ‌ ಮಾಡುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಮನೋಹರ್ ಮಧುಗಿರಿ
ಸಂಚಾರ ನಿಯಮಗಳ ಪಾಲಿಸಬೇಕು ಎಂಬುದು ಮಾತಿಗೆ ಸೀಮಿತವಾಗಿದೆ. ಆದರೆ ವಾಸ್ತವವಾಗಿ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ರಾಜೇಶ್ ಮಧುಗಿರಿ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಕ್ರಮಬದ್ಧವಾಗಿ ನಿಲುಗಡೆ ಮಾಡದೆ ಸಂಚಾರ ನಿಯಮವನ್ನು ಗಾಳಿ ತೂರಿದ್ದಾರೆ. ಪಾದಚಾರಿಗಳು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಒತ್ತುವರಿ ತೆರವುಗೊಳಿಸಬೇಕು.
ಪ್ರತಾಪ್ ದೈಹಿಕ ಶಿಕ್ಷಕ ಮಧುಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.