ADVERTISEMENT

ಆನ್‌ಲೈನ್‌ಗೆ ಪರಿವರ್ತನೆಯಾದ ಶಿಕ್ಷಣ: ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 2:09 IST
Last Updated 20 ಜೂನ್ 2021, 2:09 IST
ತುಮಕೂರು ವಿ.ವಿ.ಯಲ್ಲಿ ನಡೆದ ವೆಬಿನಾರ್‌ನಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿದರು
ತುಮಕೂರು ವಿ.ವಿ.ಯಲ್ಲಿ ನಡೆದ ವೆಬಿನಾರ್‌ನಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿದರು   

ತುಮಕೂರು: ಕೋವಿಡ್‌ನಿಂದಾಗಿ ಶಿಕ್ಷಣ ಆನ್‌ಲೈನ್‌ಗೆ ಪರಿವರ್ತನೆಯಾಗಿ ಕಲಿಕೆಯ ಪ್ರಕ್ರಿಯೆ ಮುಂದುವರಿದಿದೆ ಎಂದು ತುಮಕೂರುವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ‘ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಉನ್ನತ ಶಿಕ್ಷಣದಲ್ಲಿ ಡಿಜಿಟಲೈಸೇಷನ್‍ನ ತಂತ್ರಗಳು’ ಕುರಿತು ವೆಬಿನಾರ್‌ನಲ್ಲಿಮಾತನಾಡಿದರು.

‘ಕೊರೊನಾ ಸೋಂಕು ಬರುವುದಕ್ಕಿಂತ ಮುಂಚೆಯೇ ನಾನು ವಿವಿಧ ವೇದಿಕೆಗಳಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ಬದಲಾಗುತ್ತದೆ ಎನ್ನುವುದರ ಬಗ್ಗೆ ಮಾತನಾಡಿದ್ದೆ. ಕೋವಿಡ್ ಕೆಲವೇ ತಿಂಗಳಲ್ಲಿ ಇಡೀ ಶಿಕ್ಷಣ ವ್ಯವಸ್ಥೆ, ಕಲಿಕೆ,ಬೋಧನಾ ಕ್ರಮವನ್ನೇ ಬದಲಾವಣೆ ಮಾಡಿದೆ. ಇದಕ್ಕಾಗಿ ಕೊರೊನಾಗೆ ಧನ್ಯವಾದ ತಿಳಿಸಬೇಕಿದೆ. ಹಿಂದೆ ನಾವು ಹೋಲಿಕೆ ಮಾಡುತ್ತಿದ್ದ ಹಿಂದುಳಿದ, ಮುಂದುವರಿಯುತ್ತಿರುವ, ಮುಂದುವರಿದ ಎನ್ನುವ ಅಂತರ ಇಲ್ಲದಂತಾಗಿ ಪ್ರಸ್ತುತ ಎಲ್ಲರೂ ಒಂದೇ ಎನ್ನುವಂತಾಗಿದೆ’ಎಂದರು.

ADVERTISEMENT

ಕೋವಿಡ್ ಶೈಕ್ಷಣಿಕ ವಲಯದಲ್ಲಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದ್ದರೂ ತಂತ್ರಜ್ಞಾನದ ಸದುಪಯೋಗ
ದಿಂದ ಯುವಜನತೆಗೆ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳುವಂತೆ ಮಾಡಿದೆ. ಉನ್ನತ ಶಿಕ್ಷಣದ ತರಗತಿಗಳು ನಾಲ್ಕು ಗೋಡೆಗಳ ಪರಿಮಿತಿಯನ್ನು ಭೇದಿಸಿದ್ದು, ಇಡೀ ವಿಶ್ವವೇ ಒಂದು ಪುಟ್ಟ ಹಳ್ಳಿಯಾಗಿದೆ. ಯುವಜನತೆ ಈ ಬದಲಾವಣೆಗೆ ಹೊಗ್ಗಿಕೊಳ್ಳುತ್ತಿರುವ ರೀತಿ ಅಮೋಘವಾಗಿದೆ.ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ತಂತ್ರಜ್ಞಾನ,ಸಂಪನ್ಮೂಲಗಳನ್ನು ಜ್ಞಾನಾರ್ಜನೆಗಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆಮಾಡಿದರು.

ಯುಜಿಸಿ ಸದಸ್ಯ ಪ್ರೊ.ಶಿವರಾಜು, ‘ಕೊರೊನಾ ಸಾಂಕ್ರಾಮಿಕವುಉನ್ನತ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಎಲ್ಲಾ ರೀತಿಯ ಶಿಕ್ಷಣದ ಮೇಲೆ ತನ್ನ ಪ್ರಭಾವ ಬೀರಿದೆ. ದೇಶದಲ್ಲಿ 32 ಕೋಟಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ವಿಷಮ ಸ್ಥಿತಿಯಿಂದ ಹೊರ ಬರಬೇಕಾದರೆ ಅನಿವಾರ್ಯವಾಗಿ ಡಿಜಿಟಲ್ ಶಿಕ್ಷಣದ ಮೊರೆ ಹೋಗಬೇಕಾಗಿದೆ’ ಎಂದರು.

ವಿ.ವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ.ನಿರ್ಮಲ್ ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.