ADVERTISEMENT

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ: ಬರಗೂರು ಅಭಿಮತ

ಪಾವಗಡ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:54 IST
Last Updated 4 ಫೆಬ್ರುವರಿ 2026, 5:54 IST
ಪಾವಗಡದಲ್ಲಿ ಮಂಗಳವಾರ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು
ಪಾವಗಡದಲ್ಲಿ ಮಂಗಳವಾರ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು   

ಪಾವಗಡ: ಪ್ರಾಥಮಿಕ ಹಂತದವರೆಗೆ ಏಕರೂಪದ ಶಿಕ್ಷಣ ಇರಲಿ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ 8ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಏಕರೂಪ ಶಿಕ್ಷಣದ ಸಮಸ್ಯೆ ಕಾಡುತ್ತಿದೆ. ಒಂದೊಂದು ಶಾಲೆ, ಪ್ರದೇಶಗಳಲ್ಲಿ ಒಂದೊಂದು ರೀತಿಯ ಶಿಕ್ಷಣ, ಶಿಕ್ಷಣದ ವೈವಿಧ್ಯತೆ ಎಲ್ಲೆಡೆ ಇದೆ. ಇದು ಆಘಾತಕಾರಿ ಸಂಗತಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬೇಕಿದೆ ಎಂದರು.

ADVERTISEMENT

ಪ್ರಸ್ತುತ ದೇಶದಲ್ಲಿ ಜಾತಿ ಜೈಲುಗಳು ನಿರ್ಮಾಣವಾಗಿವೆ. ಧರ್ಮ ದ್ವೇಷದ ದ್ವೀಪಗಳು ನಿರ್ಮಾಣವಾಗಿವೆ. ಜಾತಿ ತಾರತಮ್ಯ, ಪಕ್ಷ ರಾಜಕೀಯ ತಾಂಡವಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ, ಇಂದಿನ ಅನೇಕ ಬಿಕ್ಕಟ್ಟುಗಳು, ಅಸಹಿಷ್ಣುತೆಗೆ ಕನ್ನಡ ಸಾಹಿತ್ಯದಲ್ಲಿ ಸೂಕ್ತ ಉತ್ತರವಿದೆ. ಸಮಾನತೆ, ಭ್ರಾತೃತ್ವ ಇತ್ಯಾದಿಗಳ ಬಗ್ಗೆ ಕನ್ನಡದ ಕವಿಗಳು ಕೃತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಸಮಸ್ಯೆಗಳು ಬಂದಾಗ ಹೋರಾಟದ ಅರಿವು ನಮಗಿರಬೇಕು. ಆ ಮೂಲಕ ಕೆಲವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಕೋಲಾರ ಮತ್ತು ಪಾವಗಡದಲ್ಲಿ ತೆಲುಗು ಭಾಷೆ ಮಾತನಾಡುವವರು ಇದ್ದಾರೆ. ಆದರೆ ಒಂದೂ ತೆಲುಗು ಶಾಲೆ ಈ ಭಾಗದಲ್ಲಿಲ್ಲ. ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವ ಜನತೆ ಇಲ್ಲಿದ್ದಾರೆ. ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಇದ್ದು, ಗಡಿನಾಡಿಗೆ ಹೆಚ್ಚಿನ ಒತ್ತು, ಅನುದಾನ ನೀಡುತ್ತದೆಯಾದರೂ ತಾಲ್ಲೂಕಿನಲ್ಲಿ ಗಡಿನಾಡ ಕನ್ನಡ ಭವನ ಇಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಣ್ಣನಾಗಪ್ಪ, ತೆಲುಗು ಮಯವಾಗಿರುವ ತಾಲ್ಲೂಕಿನಲ್ಲಿ ಜಾನಪದ, ಸಂಸ್ಕೃತಿ ಹೇರಳವಾಗಿದೆ. ಅದನ್ನು ಹೊರತರುವ ಪ್ರಯತ್ನಗಳು ನಡೆಯಬೇಕಿದೆ. ಜನಪದ, ಸಾಹಿತ್ಯ, ಇತಿಹಾಸ ಸಂಶೋಧನೆಗಳು ಹೆಚ್ಚಿನದಾಗಿ ನಡೆಯಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವ ಸಲುವಾಗಿ ತಾಲ್ಲೂಕಿನಲ್ಲಿ ಅವಕಾಶ ರೂಪುಗೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ್‌, ವಂತಿಗೆ ರೂಪದಲ್ಲಿ ಅಧಿಕಾರ ಪಡೆಯುತ್ತಿರುವ ಜನಪ್ರತಿನಿಧಿಗಳು ತಾಲ್ಲೂಕಿನ ಪ್ರಗತಿಗೆ ಹೆಚ್ಚು ಶ್ರಮ ವಹಿಸುತ್ತಿಲ್ಲ. ವಲಸೆ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ತಾಂತ್ರಿಕ ಉನ್ನತ ಶಿಕ್ಷಣಗಳೂ ಇಂದಿಗೂ ಮರೀಚಿಕೆಯಾಗಿ ಉಳಿದಿವೆ. ತಾಲ್ಲೂಕಿನ ಜನತೆ ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಧೈರ್ಯ ತೋರುತ್ತಿಲ್ಲ ಹೀಗಾಗಿ ಗಡಿ ತಾಲ್ಲೂಕಿಗೆ ಅನುದಾನಗಳ ಕೊರತೆಯಾಗುತ್ತಿದೆ ಎಂದು ತಿಳಿಸಿದರು.

ವಿಚಾರ ಗೋಷ್ಠಿಯಲ್ಲಿ ಡಾ.ಎಂ.ಗೋವಿಂದರಾಯ, ಸಮ್ಮೇಳನ ಅಧ್ಯಕ್ಷ ಸಾಹಿತಿ ಸಣ್ಣನಾಗಪ್ಪ ಅವರ ಕೃತಿಗಳ ಅವಲೋಕನ ನಡೆಸಿದರು. ಡಾ.ಕೆ.ವಿ ಮುದ್ದವೀರಪ್ಪ ತಾಲ್ಲೂಕಿನ ಸಾಹಿತ್ಯ ಪರಂಪರೆ ಮತ್ತು ಇತಿಹಾಸದ ಬಗ್ಗೆ ವಿಷಯ ಮಂಡಿಸಿದರು. ಡಾ.ಎಚ್‌.ಕೆ.ನರಸಿಂಹಮೂರ್ತಿ ಶಿಕ್ಷಣ ಮತ್ತು ಸಮೂಹ ಮಾಧ್ಯಮಗಳ ಬಗ್ಗೆ ಮಾತನಾಡಿದರು. ಡಾ.ವಿ.ಆರ್‌ ಚೆಲುವರಾಜನ್ನ ಆಶಯ ನುಡಿಗಳನ್ನಾಡಿದರು.

24 ಕವಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಡಾ.ಎಸ್‌ ನಾಗರತ್ನಮ್ಮ ತಾಲ್ಲೂಕಿನ ಸ್ವತಂತ್ರ ಹೋರಾಟಗಾರರ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಅಭಿನಂದಿಸಲಾಯಿತು.

ಪಟ್ಟಣದ ಗುರುಭವನದಿಂದ ಎಸ್‌ಎಸ್‌ಕೆ ಸಮುದಾಯ ಭವನದವರೆಗೆ ಕಲಾ ತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರ ಪುರಮೆರವಣಿಗೆ ನಡೆಯಿತು.

ಹ ರಾಮಚಂದ್ರಪ್ಪ ಕನ್ನಡ ಧ್ವಜವನ್ನು ಸಣ್ಣನಾಗಪ್ಪ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌ ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಡಿಡಿಪಿಐ ಮಾಧವರೆಡ್ಡಿ, ಬಿಇಒ ರೇಣುಕಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್‌, ಸಾಹಿತಿ ಸುರೇಶ್‌ ನಾಗಲಮಡಿಕೆ, ಸುಮಾ ಆನಂದರಾವ್‌, ಡಾ.ಯೋಗೀಶ್ವರಪ್ಪ, ಕಂಠಲಗೆರೆ ಸಣ್ಣಹೊನ್ನಯ್ಯ, ಆರ್‌.ಟಿ ಖಾನ್‌, ಹೊ.ಮಾ ನಾಗರಾಜು, ಪ್ರಮೋದ್‌, ಮದ್ದಿಬಂಡೆ ವಿಶ್ವನಾಥ್‌, ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಅನಿಲ್‌, ಐ.ಎ ನಾರಾಯಣಪ್ಪ, ಕೊತ್ತೂರು ಪ್ರಭಾಕರ್‌, ನಾಗೇಂದ್ರ, ರಿಜ್ವಾನ್‌, ಕೆ.ರಂಗಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.