ADVERTISEMENT

ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ಬೇಕು ರೋಪ್ ವೇ: ಸ್ಥಳೀಯರಿಗೆ ಉದ್ಯೋಗ ನಿರೀಕ್ಷೆ

ಪ್ರವಾಸೋದ್ಯಮ ಅಭಿವೃದ್ಧಿ

ಗಂಗಾಧರ್ ವಿ ರೆಡ್ಡಿಹಳ್ಳಿ
Published 11 ಜನವರಿ 2026, 6:52 IST
Last Updated 11 ಜನವರಿ 2026, 6:52 IST
ಮಧುಗಿರಿ ಏಕಶಿಲಾ ಬೆಟ್ಟ
ಮಧುಗಿರಿ ಏಕಶಿಲಾ ಬೆಟ್ಟ   

ಮಧುಗಿರಿ: ಪಟ್ಟಣದಲ್ಲಿ ಏಕಶಿಲಾ ಬೆಟ್ಟಕ್ಕೆ ಶೀಘ್ರ ರೋಪ್‌ವೇ ನಿರ್ಮಾಣವಾದರೆ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ದೊರೆತು ಆರ್ಥಿಕ ಚೇತರಿಕೆಗೆ ಪೂರಕವಾಗಲಿದೆ ಎನ್ನುವುದು ಸ್ಥಳೀಯರ ಆಶಯ.

ಶ್ರೀಮಂತ ಇತಿಹಾಸ ಹೊಂದಿರುವ ಮಧುಗಿರಿಯಲ್ಲಿನ ಏಕಾಶಿಲಾ ಬೆಟ್ಟ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ. ಕೋಟೆ ತನ್ನ ಅಪ್ರತಿಮ ಸಾಹಸದ ಜೊತೆಗೆ ಚಾರಣಕ್ಕೂ ಹೆಸರುವಾಸಿ. ಬೆಂಗಳೂರಿನಿಂದ ಕೇವಲ 105 ಕಿ.ಮೀ. ಮತ್ತು ತುಮಕೂರಿನಿಂದ 43 ಕಿ.ಮೀ. ಅಂತರದಲ್ಲಿರುವುದರಿಂದ ಪ್ರವಾಸಿಗರು ಬಂದು ಹೋಗಲು ಹೆಚ್ಚು ಅನುಕೂಲಕರವಾಗಿದೆ.

ಏಕಾಶಿಲಾ ಬೆಟ್ಟದ ಕೆಳ ಭಾಗದಲ್ಲಿ ನಾಲ್ಕು ಗುಹೆ, 11 ಸುಂದರ ಗೋಡೆ, ಭೀಮನ ದೊಣೆ, ನವಿಲು ದೊಣೆ, ಕುದುರೆ ಲಾಯ, ಶಸ್ತ್ರಾಸ್ತ್ರ ಸಂಗ್ರಹ ಉಗ್ರಾಣ, ಅರಮನೆ, ಕಲ್ಲಿನ ಕೋಟೆ, ಗುಮ್ಮಟ, ಕಣಜಗಳು ಸೇರಿದಂತೆ ಅನೇಕ ತಾಣಗಳಿವೆ. ಪ್ರವೇಶದ್ವಾರ 25 ಅಡಿ ಎತ್ತರ ಮತ್ತು 17 ಅಡಿ ಅಗಲವಿದೆ. ಕೋಟೆ ಹಲವು ನೀರಿನ ತೊಟ್ಟಿಗಳನ್ನು ಮತ್ತು ಗೋಪಾಲಕೃಷ್ಣ ದೇವಾಲಯವನ್ನು ಹೊಂದಿದೆ. ದೇವಸ್ಥಾನದ ಕೆತ್ತನೆಗಳು ಹೊಯ್ಸಳ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಬೆಟ್ಟದ ಕೆಳಗಿರುವ ಐತಿಹಾಸಿಕ ಮಲ್ಲೇಶ್ವರಸ್ವಾಮಿ, ವೆಂಕಟರವಣಸ್ವಾಮಿ ಮತ್ತು ದಂಡಿಮಾರಮ್ಮ ದೇವಸ್ಥಾನಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ.

ADVERTISEMENT

ಕಡಿದಾದ ಬೆಟ್ಟ ಮತ್ತು ಕೋಟೆಯ ತುದಿ ತಲುಪಿದರೆ ರಮಣೀಯ ದೃಶ್ಯಗಳನ್ನು ಕಾಣಬಹುದು. ಆದರೆ ಕೆಲ ವೃದ್ಧರು, ಮಹಿಳೆಯರು, ಮಕ್ಕಳು, ಇನ್ನಿತರರು ಏರುವುದು ಕಷ್ಟಸಾಧ್ಯ. ಹಾಗಾಗಿ ಬೆಟ್ಟಕ್ಕೆ ಶೀಘ್ರ ರೋಪ್ ವೇ ಅಳವಡಿಸಿದರೆ ಅನುಕೂಲವಾಗುತ್ತದೆ. ತಾಲ್ಲೂಕಿನಲ್ಲಿ ವ್ಯಾಪಾರ ವಹಿವಾಟು ದುಪ್ಪಟ್ಟಾಗಿ ಸ್ಥಳೀಯರಿಗೆ ಉದ್ಯೋಗ ದೊರಕಲಿದೆ.

ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮ, ಜಯಮಂಗಲಿ ನದಿ ಮತ್ತು ತಿಮ್ಮಲಾಪುರ ಕರಡಿಧಾಮಕ್ಕೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎನ್ನುವುದು ಜನರ ಆಶಯ.

ಏಕಶಿಲಾ ಬೆಟ್ಟದಲ್ಲಿನ ಕೋಟೆ
ಏಕಶಿಲಾ ಗಿರಿಗೆ ರೋಪ್‌ ವೇ ಅಳವಡಿಸಿದರೆ ಐತಿಹಾಸಿಕ ಬೆಟ್ಟವನ್ನು ವೀಕ್ಷಿಸುವ ಭಾಗ್ಯ ಅಬಾಲ ವೃದ್ಧರಿಗೆ ಸಿಗುತ್ತದೆ. ಪ್ರವಾಸಿಗರಿಗೆ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ.
ಲಲಿತಾಂಬ ಗಾಯಕಿ ಮಧುಗಿರಿ
ರೋಪ್ ವೇ ಅಳವಡಿಸಲು ಶಾಸಕ ಕೆ.ಎನ್. ರಾಜಣ್ಣ ಈಗಾಗಲೇ ಸರ್ವೆ ನಡೆಸಿ ಅಗತ್ಯ ಕ್ರಮ ಕೈಗೊಂಡಿರುವುದು ಖುಷಿಯ ವಿಚಾರ. ಇದರಿಂದ ಚಾರಣಿಗರು ಸ್ಥಳೀಯರಿಗೆ ಸಹಕಾರಿ.
ಮುನೀಂದ್ರಕುಮಾರ್ ಮಧುಗಿರಿ
ರೋಪ್ ವೇ ನಿಂದ ಮಧುಗಿರಿ ಬೆಟ್ಟ ಹತ್ತಲಾಗದವರಿಗೆ ಸದವಾಕಾಶ ದೊರೆಯುತ್ತದೆ. ಏಕಶಿಲೆಯ ಖ್ಯಾತಿ ಎಲ್ಲೆಡೆ ಪಸರಿಸಿದಂತಾಗುತ್ತದೆ. ಬೆಟ್ಟದ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು.
ರತ್ನ ಬಡವನಹಳ್ಳಿ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.