
ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತಂತ್ರಗಾರಿಕೆಯನ್ನು ಮೆಟ್ಟಿನಿಂತು, ಬಿಜೆಪಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ತಾಲ್ಲೂಕಿನ ಆಲಪ್ಪನಗುಡ್ಡೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊದಲಿಗೆ ಮಂತ್ರಗಳು ಕೆಲಸ ಮಾಡುತ್ತಿದ್ದು, ನಂತರ ಯಂತ್ರಗಳು ಕೆಲಸ ಮಾಡಿದವು. ಸದ್ಯ ರಾಜಕಾರಣದಲ್ಲಿ ತಂತ್ರ, ಕುತಂತ್ರಗಳು ಕೆಲಸ ಮಾಡುತ್ತಿವೆ. ಮತದಾರ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆಯಾಗುತ್ತದೆ ಎಂಬ ಕೂಗು ಎದ್ದಿದೆ. ಪ್ರಧಾನಿ ನರೇಂದ್ರ ಮೋದಿಯವವೇ ‘ಡಾ.ಬಿ.ಆರ್. ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆಯಾಗುವುದಿಲ್ಲ, ಸುಭದ್ರವಾಗಿರುತ್ತದೆ’ ಎಂದು ತಿಳಿಸಿ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ‘ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿರುವಂತೆ ತಾಲ್ಲೂಕಿನಲ್ಲಿ ಸಹೋದರರು ಒಂದಾಗಿದ್ದೇವೆ. ಡಿ.ಕೆ.ಸುರೇಶ್ ಅವರಿಗೆ ಕುಣಿಗಲ್ ತಾಲ್ಲೂಕಿನವರ ಮತ ಬೇಕಾಗಿದೆ. ಆದರೆ ಅವರಿಗೆ ತಾಲ್ಲೂಕಿನ ಅಭಿವೃದ್ಧಿಗಿಂತಲೂ ಕನಕಪುರ, ರಾಮನಗರ ಅಭಿವೃದ್ಧಿ ಮುಖ್ಯವಾಗಿರುವುದರಿಂದ ಸಂಪರ್ಕ ಕಾಲುವೆ ನಿರ್ಮಿಸಿ ಹೇಮಾವತಿ ನೀರನ್ನು ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗಲು ಸಂಚು ಹೂಡಿದ್ದಾರೆ. ಕುಣಿಗಲ್ ದೊಡ್ಡಕೆರೆ ನೀರನ್ನು ಕುಡಿಯುವ ನೀರಿಗೆ ಮೀಸಲಿಟ್ಟು, ನಡೆಮಾವಿನಪುರ, ಚೊಟ್ಟನಹಳ್ಳಿ, ಸೇರಿದಂತೆ ಇತರೆ ಗ್ರಾಮಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಯದಂತೆ ಮಾಡಿದ್ದಾರೆ’ ಎಂದು ಟೀಕಿಸಿದರು.
ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತುರವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ, ಮುಖಂಡರಾದ ಜಗದೀಶ್, ಹರೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.