ADVERTISEMENT

ತುಮಕೂರು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೆಗೆದಿದ್ದ ಹಳ್ಳಕ್ಕೆ ಬಿದ್ದು ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 8:19 IST
Last Updated 8 ನವೆಂಬರ್ 2022, 8:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುಮಕೂರು: ನಗರದ ಬೆಳಗುಂಬ ರಸ್ತೆಯ ಭರಣಿ ಡಾಬಾ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೆಗೆದಿದ್ದ ಹಳ್ಳಕ್ಕೆ ಬೈಕ್ ಬಿದ್ದು ನೌಕರ ಶಿವಕುಮಾರ್‌ (32) ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಹನುಮಂತಪುರದಿಂದ ಬೆಳಗುಂಬದ ಕಡೆಗೆ ಬೈಕ್‌ನಲ್ಲಿ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಿವಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಯ ಸೀತಾಪುರ ಗ್ರಾಮದ ನಿವಾಸಿಯಾಗಿದ್ದು, ಬೆಳಗುಂಬದಲ್ಲಿ ವಾಸವಿದ್ದರು. ಆಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ರಸ್ತೆ ಅಭಿವೃದ್ಧಿ ಕಾಮಗಾರಿಯು ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದು, ಸೂಚನಾ ಫಲಕ ಅಳವಡಿಸಿರಲಿಲ್ಲ. ಈಗಾಗಲೇ ಸುಮಾರು ಹದಿನೈದರಿಂದ ಇಪ್ಪತ್ತು ಜನ ಹಳ್ಳಕ್ಕೆ ಬಿದ್ದು, ಗಾಯಗೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವ್ಯಕ್ತಿ ಪ್ರಾಣ ಹೋಗಿದೆ. ಕಾಮಗಾರಿ ಪೂರ್ಣಗೊಳಿಸಿ ಹಳ್ಳ ಮುಚ್ಚದಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹಳ್ಳ ಮುಚ್ಚಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.