ADVERTISEMENT

ಗುಬ್ಬಿ: ಪರಿಸರ ಅರಿವಿನ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:06 IST
Last Updated 5 ಜೂನ್ 2021, 6:06 IST
ವಿದ್ಯಾರ್ಥಿಗಳೊಂದಿಗೆ ರಸ್ತೆ ಬದಿಯ ಸಸಿಗಳ ಪೋಷಣೆಯಲ್ಲಿ ನಿರತ ಯತೀಶ್ ಹಾಗೂ ಗೀತಾ
ವಿದ್ಯಾರ್ಥಿಗಳೊಂದಿಗೆ ರಸ್ತೆ ಬದಿಯ ಸಸಿಗಳ ಪೋಷಣೆಯಲ್ಲಿ ನಿರತ ಯತೀಶ್ ಹಾಗೂ ಗೀತಾ   

ಗುಬ್ಬಿ: ಸಮಾನ ಮನಸ್ಕರಾದ ಯೋಗೀಶ್‌ ಹಾಗೂ ಗೀತಾ ತಾಲ್ಲೂಕಿನೆಲ್ಲೆಡೆ ಹಸಿರ ಜಾಗೃತಿಯನ್ನು ಬಿತ್ತುತ್ತಿದ್ದಾರೆ.

ರೈತಾಪಿ ಕುಟುಂಬದವರಾದ ಅಳ್ಳೆನಹಳ್ಳಿ ಗೀತಾ ಹಾಗೂ ಯಲಚಿಹಳ್ಳಿಯ ಯೋಗೀಶ್‌ ತಮ್ಮ ಜಮೀನಿನಲ್ಲಿ ಅಪರೂಪದ ಜಾತಿಯ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಗ್ರಾಮದ ಸುತ್ತ ಮುತ್ತ, ರಸ್ತೆ ಬದಿ ಹಾಗೂ ಶಾಲೆಗಳ ಆವರಣಗಳಲ್ಲಿ ಉರುಗಲು, ಕಮರ, ನವಿಲಾಡಿ, ಬಿಳಿಸುರುಗ ಮುಂತಾದ ವಿಶಿಷ್ಟ ಜಾತಿಯ ಮರಗಳ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಹಾಗೂ ಕೆರೆ ಅಂಗಳದಲ್ಲಿ ಅರಣ್ಯ ಇಲಾಖೆ ನೆಟ್ಟು ಪೋಷಿಸದೆ ಬಿಟ್ಟಿರುವ ಸಸಿಗಳನ್ನು ಇವರು ಪೋಷಿಸುತ್ತಿದ್ದಾರೆ.

ಶಾಲೆ ಹಾಗೂ ಹಳ್ಳಿಗಳಿಗೆ ಭೇಟಿ ನೀಡಿ ಮಕ್ಕಳು ಮತ್ತು ಗ್ರಾಮಸ್ಥರಲ್ಲಿ ಪರಿಸರದ ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ‘ಹಕ್ಕಿ ಪಕ್ಕದ ಬಳಗ’ ಎಂಬ ಸಂಘದ ಮೂಲಕ ಮಕ್ಕಳಿಗೆ ಪಕ್ಷಿಗಳ ಜೀವನ ಶೈಲಿಯ ಅರಿವು ಮೂಡಿಸುತ್ತಿದ್ದಾರೆ. ವಿಶಿಷ್ಟ ಜಾತಿಯ ಪಕ್ಷಿ ರಕ್ಷಣೆಯಲ್ಲೂ ಸಕ್ರಿಯರಾಗಿದ್ದಾರೆ.

ADVERTISEMENT

ಗ್ರಾಮಸ್ಥರೊಂದಿಗೆ ಸೇರಿಕೊಂಡು ‘ಪರಿಸರ ಸಂರಕ್ಷಣಾ ಬಳಗ’ ರಚಿಸಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಮೂಡಿಸಿದ್ದಾರೆ. ಗ್ರಾಮಸ್ಥರು ಅವರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದರ ಜೊತೆಗೆ ರಸ್ತೆ ಬದಿ ಇರುವ ಮರಗಳನ್ನು ಕಡಿಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ವಿದ್ಯಾರ್ಥಿಗಳನ್ನು ಕಾಡುಗಳಿಗೆ ಕರೆದುಕೊಂಡು ಹೋಗಿ ಬೀಜಗಳನ್ನು ಸಂಗ್ರಹಿಸಿ, ಶಾಲೆಗಳ ಅವರಣಗಳಲ್ಲಿ ಮಕ್ಕಳೇ ಸಸಿಗಳನ್ನು ನೆಟ್ಟು ಬೆಳಸಲು ಪ್ರೇರಣೆಯಾಗಿದ್ದಾರೆ.

‘ಇತ್ತೀಚೆಗೆ ಕಡಬ ಹೋಬಳಿ ಕೋಡಿಹಟ್ಟಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣದ ಜೊತೆ, ಪಕ್ಕದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಜನರಿಗೆ ಉದ್ಯೋಗದ ಜೊತೆಗೆ ಪರಿಸರದ ಅರಿವು ಮೂಡುತ್ತದೆ’ ಎನ್ನುತ್ತಾರೆ ಯೋಗೀಶ್‌ ಹಾಗೂ ಗೀತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.