ADVERTISEMENT

ತುಮಕೂರು: ಮದ್ಯ ದಾಸ್ತಾನಿನ ಲೆಕ್ಕ ಸಿಗುವುದೇ?

ಅಂಗಡಿಗಳಲ್ಲಿ ದಾಸ್ತಾನಿನ ವಿವರ ಸಂಗ್ರಹಿಸುತ್ತಿರುವ ಅಬಕಾರಿ ಇಲಾಖೆ ಅಧಿಕಾರಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 3 ಮೇ 2020, 1:29 IST
Last Updated 3 ಮೇ 2020, 1:29 IST
ಮದ್ಯದಂಗಡಿ– ಸಾಂದರ್ಭಿಕ ಚಿತ್ರ
ಮದ್ಯದಂಗಡಿ– ಸಾಂದರ್ಭಿಕ ಚಿತ್ರ   

ತುಮಕೂರು: ಲಾಕ್‌ಡೌನ್‌ಗೂ ಮುನ್ನ ಮದ್ಯದ ಅಂಗಡಿಗಳಲ್ಲಿ ದಾಸ್ತಾನಿದ್ದ ಸರಕು ಅದೇ ಪ್ರಮಾಣದಲ್ಲಿ ಈಗಲೂ ಇದೆಯೇ? ಹೀಗೊಂದು ಪ್ರಶ್ನೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಖಚಿತ ಉತ್ತರ ದೊರೆಯುವುದು ಕಷ್ಟ. ಜನರನ್ನು ಕೇಳಿದರೆ, ‘ಅಯ್ಯೊ ಅಂಗಡಿಯಲ್ಲಿ ನಾಲ್ಕು ಬಾಟ್ಲಿನಾದರೂ ಇದ್ದಾವ ನೋಡಿ’ ಎಂದು ಮುಗುಳ್ನಗುತ್ತಾರೆ.

ಲಾಕ್‌ಡೌನ್ ವೇಳೆ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ ಪರಿಣಾಮ ಕದ್ದುಮುಚ್ಚಿ ವಹಿವಾಟು ನಡೆದಿರುವುದು ಬಹಿರಂಗ ಸತ್ಯ. ₹100, 150ಕ್ಕೆ ಸಿಗುತ್ತಿದ್ದ ಮದ್ಯ ಕಳ್ಳದಾರಿಯಲ್ಲಿ ₹ 600–700ಕ್ಕೆ ಮಾರಾಟವಾಗಿದೆ. ₹1,000 ಬೆಲೆಯ ಮದ್ಯ ₹7,000ಕ್ಕೂ ಹೆಚ್ಚು ಬೆಲೆಗೆ ಮಾರಿದ್ದಾರೆ. ಹೆಚ್ಚು ಕಡಿಮೆ ಎಲ್ಲ ಅಂಗಡಿಗಳಲ್ಲಿ ‘ಕಳ್ಳದಾರಿ’ಯಲ್ಲಿ ಮದ್ಯ ಮಾರಾಟವಾಗಿದೆ.

ಇದರಿಂದ ಅಂಗಡಿಗಳ ಮಾಲೀಕರ ಜೇಬು ಭರ್ಜರಿಗಾಗಿಯೇ ತುಂಬಿದೆ. ಸರಾಸರಿ ₹1 ಲಕ್ಷದ ಸರಕು ದಾಸ್ತಾನಿದ್ದರೆ ಮೂರ್ನಾಲ್ಕು ಪಟ್ಟು ಹಣ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಮಾರಾಟ ಮಾಡುವ ಸಬ್‌ಡೀಲರ್‌ಗಳು ಸಹ ಚೆನ್ನಾಗಿಯೇ ಕಾಸು ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕಳ್ಳದಾರಿಯಲ್ಲಿ ಮದ್ಯ ಮಾರಾಟ ಮಾಡಿದವರು ಕೆಲ ತಿಂಗಳ ಆದಾಯವನ್ನು ಕೆಲವೇ ದಿನಗಳಲ್ಲಿ ಕಂಡಿದ್ದಾರೆ.

ADVERTISEMENT

ಲಾಕ್‌ಡೌನ್ ತೆರವಾದ ನಂತರ ಮದ್ಯದ ದಾಸ್ತಾನಿನ ವಿವರ ಸಂಗ್ರಹಿಸಲಾಗುವುದು, ವ್ಯತ್ಯಾಸ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೂ ಈ ವಿಚಾರದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ‘ಎಚ್ಚರಿಕೆ’ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆಯೇ ಎನ್ನುವ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.

ತಮ್ಮ ಅಂಗಡಿಗಳಿಗೇ ಕನ್ನ: ಮದ್ಯದ ಅಂಗಡಿ ಮಾಲೀಕರು ಸರ್ಕಾರದ ತೂಗುಕತ್ತಿಯಿಂದ ಪಾರಾಗಲು ಮತ್ತು ಹಣ ಮಾಡಲು ‘ಕನ್ನ’ದ ದಾರಿ ಹುಡುಕಿಕೊಂಡಿದ್ದರು. ಅಂಗಡಿಗಳ ಬೀಗಮುರಿಸಿ ಮದ್ಯ ಬೇರೆಡೆ ಸಾಗಣೆ ಮಾಡಿ ‘ಕಳ್ಳತನ’ ನಡೆದಿದೆ ಎನ್ನುವ ನಾಟಕವನ್ನುಭರ್ಜರಿಯಾಗಿಯೇ ಸೃಷ್ಟಿಸಿದ್ದಾರೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಹೆಬ್ಬೂರು, ಬೇಡತ್ತೂರು, ಕೋರ ಹೀಗೆ ಹಲವು ಕಡೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.

ಲಾಕ್‌ಡೌನ್ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 53 ಪ್ರಕರಣಗಳು ದಾಖಲಾಗಿವೆ.

ದಾಸ್ತಾನು ವ್ಯತ್ಯಾಸವಾಗಿದ್ದರೆ ಕ್ರಮ

ಮದ್ಯದ ಅಂಗಡಿಗಳಲ್ಲಿ ದಾಸ್ತಾನು ಪರಿಶೀಲಿಸುವ ಕಾರ್ಯ ಮೇ 2ರಿಂದ ಜಿಲ್ಲೆಯಲ್ಲಿ ಆರಂಭವಾಗಿದೆ. ದಿನವೂ ಎಷ್ಟು ವ್ಯಾಪಾರ ನಡೆಯುತ್ತದೆ ಎನ್ನುವ ವಿವರಗಳನ್ನು ಒಳಗೊಂಡ ದಾಖಲೆ ಪುಸ್ತಕವನ್ನು ಮದ್ಯದ ಅಂಗಡಿಗಳಲ್ಲಿ ನಿರ್ವಹಿಸಬೇಕು. ಒಂದು ವೇಳೆ ಲಾಕ್‌ಡೌನ್ ಹಿಂದು ಮುಂದೆ ಆ ರೀತಿ ನಿರ್ವಹಣೆ ಆಗದಿದ್ದರೆ ಸರಾಸರಿ ಆಧಾರದಲ್ಲಿ ಇಷ್ಟು ಮದ್ಯ ಮಾರಾಟ ಆಗಿರಬಹುದು ಎಂದು ಅಂದಾಜಿಸಲಾಗುತ್ತದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಉಪಆಯುಕ್ತ ನಾಗರಾಜ್ ತಿಳಿಸಿದರು.

‘ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಕೆಲವು ಅಂಗಡಿಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಸಹ ಬಂದಿವೆ. ಮದ್ಯವನ್ನು ಕದ್ದು ಮಾರಾಟ ಮಾಡಿದ್ದಾರೆ ಎನ್ನುವ ಆರೋಪಗಳು ಕೆಲವು ಅಂಗಡಿಗಳ ಬಗ್ಗೆ ಬಂದಿದ್ದವು. ದಾಸ್ತಾನು ಪರಿಶೀಲಿಸಿದ ನಂತರ ಕಡಿಮೆ ಇರುವುದು ತಿಳಿಯಿತು. ಅಂತಹ ಎರಡು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಲಾಕ್‌ಡೌನ್ ಅವಧಿಯಲ್ಲೂ ಮದ್ಯಮಾರಾಟ ಸೇರಿದಂತೆ ನಿಯಮ ಉಲ್ಲಂಘಿಸಿದ 7 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದರು.

ಕೆಲವರ ವಿರುದ್ಧ ಮಾತ್ರ ಪ್ರಕರಣ; ಆರೋಪ

ಲಾಕ್‍ಡೌನ್ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಹಲವು ಅಂಗಡಿಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ಆದರೆ ಏಳೆಂಟು ಅಂಗಡಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ ಎಂದು ಕೆಲವು ಮದ್ಯದ ಅಂಗಡಿ ಮಾಲೀಕರು ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರಭಾವ, ಮರ್ಜಿ, ಆಮಿಷಕ್ಕೆ ಒಳಗಾಗಿ ಹಲವು ಅಂಗಡಿಗಳ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ದೂರಿದ್ದಾರೆ. ಮೇ 4ರಂದು ಆರಂಭವಾಗುವ ಮದ್ಯದಂಗಡಿಗಳಲ್ಲಿ ಎಷ್ಟು ದಾಸ್ತಾನು ಇದೆ ಎಂಬ ಬಗ್ಗೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತಪಾಸಣೆ ನಡೆಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.