ADVERTISEMENT

ತುಮಕೂರು | ದನ ಜಾತ್ರೆ: ಖರೀದಿಗೂ ತಟ್ಟಿದ ಬರದ ಬಿಸಿ

ಜಾನುವಾರು ಜಾತ್ರೆಗೆ ಬಂದ ಸಾವಿರಾರು ರಾಸುಗಳು, ಖರೀದಿಗೆ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:03 IST
Last Updated 29 ಫೆಬ್ರುವರಿ 2024, 8:03 IST
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಜಾನುವಾರು ಜಾತ್ರೆಗೆ ಬಂದಿರುವ ರಾಸುಗಳು
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಜಾನುವಾರು ಜಾತ್ರೆಗೆ ಬಂದಿರುವ ರಾಸುಗಳು   

ತುಮಕೂರು: ತೀವ್ರ ಬರದಿಂದ ಕಂಗೆಟ್ಟಿರುವ ರೈತರು ಜಾನುವಾರುಗಳ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ನಗರದ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ರಾಸುಗಳ ಖರೀದಿಗೆ ರೈತರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.

ಈ ಬಾರಿ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಜಾನುವಾರುಗಳ ಮೇವು, ನೀರಿಗೂ ಸಂಕಷ್ಟ ಎದುರಾಗಿದೆ. ಇದರಿಂದ ಹೊಸದಾಗಿ ದನಗಳನ್ನು ಖರೀದಿಸಿದರೆ ಅವುಗಳ ಆರೈಕೆ ಹೇಗೆ ಎಂಬುವುದು ರೈತರ ಪ್ರಶ್ನೆ. ಇದೇ ಕಾರಣದಿಂದ ಹೆಚ್ಚಿನ ರೈತರು ಜಾನುವಾರುಗಳ ಖರೀದಿಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟಕ್ಕೆ ಮುಂದಾಗಿದ್ದಾರೆ.

ಜಾನುವಾರು ಜಾತ್ರೆಗೆ ಜಿಲ್ಲೆ ಒಳಗೊಂಡಂತೆ ಮಂಡ್ಯ, ಮದ್ದೂರು, ದೊಡ್ಡಬಳ್ಳಾಪುರ, ಮೈಸೂರು, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಜಾನುವಾರುಗಳನ್ನು ಕೊಳ್ಳಲು, ಮಾರಾಟ ಮಾಡಲು ರೈತರು ಮಠದ ಆವರಣದಲ್ಲಿ ಸೇರಿದ್ದಾರೆ. ಕಳೆದ ಮೂರು– ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ರಾಸುಗಳು ಬಂದಿವೆ. ಆದರೆ, ಜಾನುವಾರುಗಳ ಖರೀದಿ ಇಳಿಮುಖ ಕಂಡಿದೆ.

ADVERTISEMENT

ಕೋವಿಡ್‌ ಪ್ರಯುಕ್ತ ಎರಡು ವರ್ಷ ಜಾನುವಾರು ಜಾತ್ರೆಯ ಸಂಭ್ರಮ ಕಡಿಮೆಯಾಗಿತ್ತು. ಕಳೆದ ಬಾರಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿತ್ತು. ಎಲ್ಲೆಡೆ ದನಗಳ ಜಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ನಿರ್ಬಂಧದ ಮಧ್ಯೆಯೂ ಸಿದ್ಧಗಂಗಾ ಮಠದಲ್ಲಿ ಜಾತ್ರೆ ನಡೆದಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ರಾಸುಗಳು ಸೇರಿರಲಿಲ್ಲ.

ಈ ವರ್ಷ ದನಗಳ ಜಾತ್ರೆಗೆ ಯಾವುದೇ ಅಡ್ಡಿ–ಆತಂಕ ಇಲ್ಲದ ಕಾರಣ ಹೆಚ್ಚಿನ ರಾಸುಗಳು ಬಂದಿವೆ. ₹10 ಸಾವಿರದಿಂದ ₹4 ಲಕ್ಷದ ವರೆಗೆ ಬೆಲೆ ಬಾಳುವ ಜಾನುವಾರುಗಳನ್ನು ಮಾರಾಟಕ್ಕೆ ಇಡಲಾಗಿದೆ. ದನಗಳಿಗೆ ಕುಡಿಯುವ ನೀರು, ನೆರಳು–ಬೆಳಕು ಇತರೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಹಳ್ಳಿಕಾರ್‌, ಸೀಮೆ ಹಸು ಸೇರಿದಂತೆ ವಿವಿಧ ಬಗೆಯ ರಾಸುಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ದನದ ಜಾತ್ರೆಯತ್ತ ದೃಷ್ಟಿ ನೆಟ್ಟಿದ್ದರು. ‘₹1 ಲಕ್ಷದ ಒಳಗೆ ಇರುವ ರಾಸುಗಳ ಖರೀದಿ ಹೆಚ್ಚಾಗಿ ನಡೆಯುತ್ತಿದೆ. ಅದಕ್ಕಿಂತ ಮೇಲ್ಪಟ್ಟ ರಾಸುಗಳನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ತಾಲ್ಲೂಕಿನ ಚಿನಿವಾರನಹಳ್ಳಿ ರಾಮಕೃಷ್ಣ ಹೇಳಿದರು.

‘ಕಳೆದ ವರ್ಷ ಚರ್ಮ ಗಂಟು ರೋಗದ ಮಧ್ಯೆಯೂ ಪರವಾಗಿಲ್ಲ ಎಂಬಂತೆ ವ್ಯಾಪಾರ ಆಗಿತ್ತು. ಈ ಬಾರಿ 3 ಜತೆ ಎತ್ತುಗಳನ್ನು ತಂದಿದ್ದೇವೆ. ಬಂದು ನಾಲ್ಕು ದಿನ ಕಳೆಯಿತು. ಇದುವರೆಗೆ ಒಂದು ಜತೆಯೂ ಮಾರಾಟ ಆಗಿಲ್ಲ’ ಎಂದು ದೊಡ್ಡಬಳ್ಳಾಪುರದ ಲಕ್ಷ್ಮಯ್ಯ ಪ್ರತಿಕ್ರಿಯಿಸಿದರು.

ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಸೇರಿರುವ ರಾಸುಗಳು
ಆಸಕ್ತಿ ಕಡಿಮೆ ಕೃಷಿ ಕಾರ್ಯದಲ್ಲಿ ಜಾನುವಾರು ಬಳಕೆ ಕಡಿಮೆಯಾದಂತೆ ರಾಸುಗಳ ಖರೀದಿಯೂ ಕುಸಿತವಾಗುತ್ತಿದೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಬಳಸುತ್ತಿದ್ದಾರೆ. ದನಗಳನ್ನು ಕಟ್ಟಿ ಆರೈಕೆ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರುತ್ತಿಲ್ಲ.
– ಕುಮಾರ್‌ ಆದಿಚುಂಚನಗಿರಿ
ವ್ಯಾಪಾರ ಕುಸಿತ ಜಾತ್ರೆಗೆ ಬಂದ ಎಲ್ಲ ರಾಸುಗಳು ಮಾರಾಟ ಆಗಲ್ಲ. ಸಿದ್ಧಗಂಗಾ ಜಾತ್ರೆಯಲ್ಲಿ ಈ ಬಾರಿ ವ್ಯಾಪಾರ– ವಹಿವಾಟು ಕುಸಿತ ಕಂಡಿದೆ. ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಜಾನುವಾರುಗಳು ಸೇರಿವೆ. ಉತ್ಸಾಹದಿಂದಲೇ ದನಗಳನ್ನು ತಂದಿದ್ದ ವ್ಯಾಪಾರಸ್ಥರು ರೈತರು ವ್ಯಾಪಾರ– ವಹಿವಾಟು ನಡೆಯದೆ ನಿರಾಸೆಯಿಂದ ವಾಪಸ್‌ ಹೋಗುವಂತಾಗಿದೆ.
–ಶಂಕರಪ್ಪ ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.