ADVERTISEMENT

ತುಮಕೂರು | ಮಕ್ಕಳ ಸಹಾಯವಾಣಿಗೂ ಸುಳ್ಳು ಕರೆಗಳು!

ಲಾಕ್‌ಡೌನ್‌ನಲ್ಲಿ ಹೆಚ್ಚಿನ ಬಾಲ್ಯವಿವಾಹ ತಡೆ ಪ್ರಕರಣಗಳು; ಸಹಾಯವಾಣಿ 1098 ಸಂಪರ್ಕ

ಡಿ.ಎಂ.ಕುರ್ಕೆ ಪ್ರಶಾಂತ
Published 26 ಜುಲೈ 2020, 20:41 IST
Last Updated 26 ಜುಲೈ 2020, 20:41 IST
   

ತುಮಕೂರು: ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಪ್ರತಿ ಜಿಲ್ಲೆಗಳಲ್ಲೂ ಸಹಾಯವಾಣಿಗಳು ಇವೆ. ಈ ಸಹಾಯವಾಣಿಗಳಿಗೂ ಸುಳ್ಳು ಕರೆಗಳು ಬರುತ್ತಿವೆ! ಈ ಕರೆಗಳು ಸಹಾಯವಾಣಿ ಸಿಬ್ಬಂದಿಯಲ್ಲಿ ಜಿಜ್ಞಾಸೆಗಳಿಗೂ ಕಾರಣವಾಗುತ್ತಿದೆ. ಇದು ಸುಳ್ಳು ಕರೆಯೋ, ಪೂರ್ಣ ಮಾಹಿತಿ ನೀಡದ ಕರೆಯೋ ಎನ್ನುವುದೇ ಈ ಜಿಜ್ಞಾಸೆ.

ತಿಪಟೂರು ತಾಲ್ಲೂಕು ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆಯು ಸಹಾಯವಾಣಿ ನಿರ್ವಹಿಸುತ್ತದೆ. ತಿಪಟೂರಿನಲ್ಲಿ ಬದುಕು ಸಂಸ್ಥೆ ಜವಾಬ್ದಾರಿ ಹೊತ್ತಿದೆ.

ನವೆಂಬರ್ 2019ರಿಂದ ಮಾರ್ಚ್ 2020ರ ವರೆಗೆ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆಯ ಸಹಾಯವಾಣಿಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 3, ವೈದ್ಯಕೀಯ ನೆರವಿನ 14, ಅಂಗನವಾಡಿ ಸಮಸ್ಯೆಗಳು 2, ವಿದ್ಯಾಭ್ಯಾಸಕ್ಕೆ ನೆರವು ಮತ್ತು ಬೆಂಬಲ 4, ಶಿಕ್ಷಣಕ್ಕೆ ಸಂಬಂಧಿಸಿದಂತೆ 6, ಬಾಲ ಕಾರ್ಮಿಕ 10, ಮಾನಸಿಕಕಿರುಕುಳ 2, ದೈಹಿಕ ದೌರ್ಜನ್ಯ 5, ಆಶ್ರಯ ಕೋರಿ 2, ಮೂಲಸೌಲಭ್ಯಗಳ ಕೊರತೆ 6, ಶಿಕ್ಷಕರು ಹೊಡೆಯುವ ಪ್ರಕರಣ 5, ಶಾಲೆ ಬಿಟ್ಟಿರುವುದು 7, ಸಮಾಲೋಚನೆ ಅವಶ್ಯ 5, ಅಸುರಕ್ಷಿತ ಸ್ಪರ್ಶ 1, ಕೌಟುಂಬಿಕ ಸಮಸ್ಯೆ 3, ಇತರ ಪ್ರಕರಣಗಳಲ್ಲಿ ನಾಲ್ಕು ಸುಳ್ಳಿನ ಕರೆಗಳು ಬಂದಿವೆ.

ADVERTISEMENT

‘ಇಂತಹ ಕಡೆಯಲ್ಲಿ ಬಾಲ್ಯ ವಿವಾಹ ನಡೆಯುತ್ತದೆ, ಇಲ್ಲವೆ ಭಿಕ್ಷಾಟನೆ ನಡೆಯುತ್ತಿದೆ ಎಂದು ಯಾರಾದರೊಬ್ಬರು ಮಾಹಿತಿ ನೀಡುವರು. ಆ ಮಾಹಿತಿ ನೀಡುವಾಗ ಹೆದರಿಕೆಯ ಕಾರಣದಿಂದ ತಮ್ಮ ಸಂಬಂಧಿಕರ, ಪರಿಚಯಸ್ಥರ ಇಲ್ಲವೆ ಮತ್ತೊಬ್ಬರ ಮೊಬೈಲ್ ಬಳಸಿದ್ದಾರೆ. ಆ ಸಂಖ್ಯೆಗೆ ನಾವು ಮತ್ತೆ ಕರೆ ಮಾಡಿದರೆ, ಆ ವ್ಯಕ್ತಿಗೆ ತನ್ನ ಮೊಬೈಲ್‌ನಿಂದ ಸಹಾಯವಾಣಿಗೆ ಕರೆ ಮಾಡಲಾಗಿದೆ ಎನ್ನುವುದು ತಿಳಿಯುತ್ತದೆ. ಆತ ನಾನು ಕರೆ ಮಾಡಿಲ್ಲ ಎಂದು ಹೇಳುತ್ತಾನೆ. ಇಂತಹ ಕರೆಗಳನ್ನೂ ಸಹ ಸುಳ್ಳು ಕರೆಗಳು ಎಂದು ನಮೂದಾಗುತ್ತವೆ’ ಎಂದು ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡುತ್ತಾರೆ.

‘ಕೆಲವರು ಮೊಬೈಲ್ ಸಂಖ್ಯೆ ತಪ್ಪು ಕೊಟ್ಟಿರುತ್ತಾರೆ. ಮಾಹಿತಿ ನೀಡಿದವರು ಮತ್ತೆ ಕರೆ ಸ್ವೀಕರಿಸುವುದಿಲ್ಲ. ಕರೆ ಮಾಡಿ ಏನೋ ಒಂದು ಹೇಳಿ ಅರ್ಧಕ್ಕೆ ಬಿಡುತ್ತಾರೆ. ಇಂತಹವೂ ಈ ಸುಳ್ಳು ಕರೆಗಳಲ್ಲಿವೆ’ ಎನ್ನುತ್ತಾರೆ.

‘ನಾವು ಕರೆ ಸ್ವೀಕರಿಸಿದ ನಂತರ ಆ ಮಾಹಿತಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು, ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಗಮನಕ್ಕೆ ತರುತ್ತೇವೆ. ಅಲ್ಲಿ ಅಂತಹ ಘಟನೆಗಳು ಜರುಗುತ್ತಿವೆಯೇ ಎನ್ನುವುದನ್ನು ಪತ್ತೆ ಮಾಡಲು ಸ್ಥಳೀಯ ಅಧಿಕಾರಿಗಳು ತೆರಳುವರು’ ಎಂದು ತಿಳಿಸಿದರು.

ಈ ಸುಳ್ಳು ಕರೆಗಳು ಸಹಾಯವಾಣಿ ಸಿಬ್ಬಂದಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕೆಲವು ವೇಳೆ ಪೀಕಲಾಟ ಸಹ ತಂದಿಡುತ್ತವೆ. ಕೆಲವು ಕರೆಗಳ ಜಾಡು ಹಿಡಿದು ನೋಡಿದಾಗ ಅಲ್ಲಿನ ವಾಸ್ತವವೇ ಬೇರೆ ಇರುತ್ತದೆ. ಇದರಿಂದ ಸಿಬ್ಬಂದಿ ಮತ್ತು ಅಧಿಕಾರಿಗಳ ಸಮಯ ಮತ್ತು ಶ್ರಮ ವ್ಯರ್ಥ. ಇಂತಹ ಪ್ರಕರಣಗಳೂ ಜಿಲ್ಲೆಯಲ್ಲಿ ನಡೆದಿವೆ. ಹೀಗೆ ‘ಸುಳ್ಳುಕರೆ’ಗಳು ಸಿಬ್ಬಂದಿಯನ್ನು ಅನಗತ್ಯವಾಗಿ ಕೆಲಸಕ್ಕೆ ದೂಡುತ್ತವೆ. ಈ ಸುಳ್ಳು ಕರೆಗಳನ್ನೂ ಸಹಾಯವಾಣಿಯಲ್ಲಿ ಗೋಪ್ಯವಾಗಿ ಇಡಲಾಗುತ್ತದೆ.

ಹೆಚ್ಚುತ್ತಲೇ ಇದೆ ಬಾಲ್ಯ ವಿವಾಹ ತಡೆ: ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ನವೆಂಬರ್ 2019ರಿಂದ ಮಾರ್ಚ್ 2020ರ ನಡುವೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 52 ದೂರುಗಳು ದಾಖಲಾಗಿವೆ. ಕಳೆದ ವಾರ ಒಂದೇ ದಿನ ಸಹಾಯವಾಣಿಗೆ ಶಿರಾ, ಮಧುಗಿರಿ ತಾಲ್ಲೂಕಿನಿಂದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ 8ಕ್ಕೂ ಹೆಚ್ಚು ಕರೆಗಳು ಬಂದಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದಕ್ಕೆ; ಬಾಲ್ಯ ವಿವಾಹ ಹೆಚ್ಚು

ಪ್ರತಿ ವರ್ಷ ಮೇ, ಜೂನ್‌ನಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತವೆ. ಇದಕ್ಕೆ ಕಾರಣಗಳನ್ನು ಹುಡುಕಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅನುತ್ತೀರ್ಣವೇ ಪ್ರಮುಖವಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಬಾಲಕಿಯರನ್ನು ಹಸೆಮಣಿಗೆ ಕೂರಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ಬಾರಿ ಮುಂದಕ್ಕೆ ಹೋಗಿದ್ದು ಸಹ ಬಾಲ್ಯ ವಿವಾಹಗಳ ಹೆಚ್ಚಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.