ADVERTISEMENT

ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:14 IST
Last Updated 3 ಡಿಸೆಂಬರ್ 2020, 14:14 IST
ಹೊನ್ನವಳ್ಳಿ ಪಂಚಾಯಿತಿ ಕಚೇರಿ ಪ್ರತಿಭಟನೆ ನಡೆಸಿದ ರೈತರು
ಹೊನ್ನವಳ್ಳಿ ಪಂಚಾಯಿತಿ ಕಚೇರಿ ಪ್ರತಿಭಟನೆ ನಡೆಸಿದ ರೈತರು   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಏತ ನೀರಾವರಿ ಯೋಜನೆಯಡಿ ಬರುವ ಕೆರೆಗಳಿಗೆ ಕೂಡಲೇ ಹೇಮಾವತಿ ನಾಲೆಯಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರೈತ ಕೃಷಿ ಕಾರ್ಮಿಕ ಸಂಘಟನೆ, ರಾಜ್ಯ ರೈತ ಸಂಘ, ತಾಲ್ಲೂಕು ಹಸಿರು ಸೇನೆ, ಹೊನ್ನವಳ್ಳಿ ಏತ ನೀರಾವರಿ, ಎತ್ತಿನಹೊಳೆ ಹೋರಾಟ ಸಮಿತಿ ಸಂಘಟನೆಗಳ ಮುಖಂಡರು ತಾಲ್ಲೂಕಿನ ಹೊನ್ನವಳ್ಳಿ ಪಂಚಾಯಿತಿ ಕಚೇರಿ ಧರಣಿ ನಡೆಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯಸಮಿತಿ ಸದಸ್ಯ ಎಸ್.ಎನ್. ಸ್ವಾಮಿ ಮಾತನಾಡಿ, ಹೊನ್ನವಳ್ಳಿ ಹೋಬಳಿ ಬರದಿಂದ ತತ್ತರಿಸಿದೆ. ಹಲವು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೆ ಕೆರೆ ಕಟ್ಟೆಗಳು ಬರಿದಾಗಿವೆ. ಅಂತರ್ಜಲ ಕುಸಿದಿದೆ. ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಈ ಭಾಗದ ಕೆರೆಗಳನ್ನು ತುಂಬಿಸಲೆಂದೇ ‌10 ವರ್ಷಗಳ ಹಿಂದೆಯೇ ₹90 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಅದನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಈಗ ಹಳ್ಳ ಹಿಡಿದಿದ್ದು ಯೋಜನೆ ಇದ್ದರೂ ರೈತರಿಗೆ ಉಪಯೋಗವಿಲ್ಲದಂತಾಗಿದೆ ಎಂದರು.

ADVERTISEMENT

ಎತ್ತಿನಹೊಳೆ ಯೋಜನೆಯಲ್ಲಿಯೂ ತಾಲ್ಲೂಕಿನ ರೈತರಿಗೆ ನೀರು ದಕ್ಕುತ್ತಿಲ್ಲ. ಮತಕ್ಕಾಗಿ ಬರುವ ರಾಜಕಾರಣಿಗಳು ಕೇವಲ ಭರವಸೆ, ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಆದರೆ ಇವುಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕಾದರೆ ಪ್ರತಿಭಟನೆ ಅನಿವಾರ್ಯವಾಗಿದೆ. ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳಿಗೂ ನಿಗದಿಪಡಿಸಿರುವ ಪ್ರಮಾಣದಲ್ಲಿ ಕೂಡಲೇ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ಹೊನ್ನವಳ್ಳಿ ಏತನೀರಾವರಿ ಹೋರಾಟ ಸಮಿತಿಯ ಚಂದ್ರೇಗೌಡ ಮಾತನಾಡಿ, ‘ನೀರು ತುಂಬಿಸದಿದ್ದರೆ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.

ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಲಾಪುರ ದೇವರಾಜು, ಹೊನ್ನವಳ್ಳಿ ನರಸಿಂಹಮೂರ್ತಿ, ಕೃಷ್ಣ
ಮೂರ್ತಿ, ಸುರೇಶ್, ಗಂಗಾಧರಗೌಡ, ಆರ್.ಕೆ.ಎಸ್‍ನ ಸಚಿನ್, ಚರಣ್ ಸಹಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.