ADVERTISEMENT

ಸುಗ್ರೀವಾಜ್ಞೆ ವಾಪಸ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:17 IST
Last Updated 11 ಆಗಸ್ಟ್ 2020, 4:17 IST
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಿಪಟೂರಿನಲ್ಲಿ ರೈತರು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಸಲ್ಲಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಿಪಟೂರಿನಲ್ಲಿ ರೈತರು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಸಲ್ಲಿಸಿದರು   

ತಿಪಟೂರು: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನೇಕ ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವುದನ್ನು ಖಂಡಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಬಂದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತ - ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್), ಬೆಲೆ ಕಾವಲು ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಜನಸ್ಪಂದನ ಟ್ರಸ್ಟ್, ಸೌಹಾರ್ದ ತಿಪಟೂರು, ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ತಿಪಟೂರು, ಕಲ್ಪತರು ರೈತ ಯುವ ವೇದಿಕೆ, ಸಾವಯವ ಕೃಷಿ ಪರಿವಾರ, ಜಾಗೃತಿ ಸೇವಾ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ರೈತ - ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಸಮಿತಿ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, 2020ರ ಜೂನ್ 3ರಂದು ಕೇಂದ್ರ ಸರ್ಕಾರ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳು ರೈತ ವಿರೋಧಿಯಾಗಿವೆ. ಈ ಕಾನೂನುಗಳು ಬೆಳೆಗಳ ದರಗಳನ್ನು ಇಳಿಸುತ್ತವೆ. ಕೃಷಿ ವೆಚ್ಚವನ್ನು ದುಬಾರಿಗೊಳಿಸಿ ಬೀಜ ಸಂರಕ್ಷಣೆಯನ್ನು ನಾಶಪಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು, ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯು ಪಾತಾಳಕ್ಕೆ ಕುಸಿದಿದೆ. ರೈತ ಸಂಘಟನೆಗಳ ಒತ್ತಡದಿಂದ ಖರೀದಿ ಕೇಂದ್ರ ತೆರೆದಿದ್ದರೂ ಗುಣಮಟ್ಟದ ಕೊಬ್ಬರಿಗೆ ಕ್ವಿಂಟಲ್‍ಗೆ ಕೇಂದ್ರ ಸರ್ಕಾರ ಕೇವಲ ₹10,300 ಬೆಂಬಲ ಬೆಲೆ ಮಾತ್ರ ಕೊಡುತ್ತಿದೆ. ಇದರಿಂದ ರೈತರಿಗೆ ಮಾರಾಟ ಮಾಡುವ ಆಸಕ್ತಿಯೇ ಇಲ್ಲ. ರಾಜ್ಯ ಸರ್ಕಾರ ಕೇವಲ ಒಂದು ಸಾವಿರ ಸಹಾಯಧನ ನೀಡಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಕೂಡಲೇ ಅದನ್ನು ₹5 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಮನೋಹರ್, ಚನ್ನಬಸವಣ್ಣ, ಈಡೇನಹಳ್ಳಿ ಲೋಕೇಶ್,
ನಾಗರಾಜು, ಪ್ರಸಾದ್, ಸಚಿನ್, ನಂಜಪ್ಪ, ಕಿರಣ್, ಬಾಲು, ಶಂಕರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.