ADVERTISEMENT

ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 3:07 IST
Last Updated 12 ಮಾರ್ಚ್ 2024, 3:07 IST
ಗುಬ್ಬಿಯ ಕಡಬ ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು
ಗುಬ್ಬಿಯ ಕಡಬ ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು   

ಗುಬ್ಬಿ: ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಬೇಸತ್ತ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಾಘಟ್ಟ, ವರಾಹಸಂದ್ರ ಭಾಗದ ನೂರಾರು ರೈತರು ಕಡಬ ಬೆಸ್ಕಾಂ ಕಚೇರಿಯ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಬೇಸಿಗೆ ಪ್ರಾರಂಭವಾಗಿದ್ದರೂ ನಿಯಮಾನುಸಾರ ವಿದ್ಯುತ್ ಸರಬರಾಜು ಮಾಡದೆ ಅಧಿಕಾರಿಗಳು ರೈತರನ್ನು ಸತಾಯಿಸುತ್ತಿದ್ದಾರೆ. ಯಾವಾಗ ವಿದ್ಯುತ್ ಕೊಡುವರೋ ತೆಗೆಯುವರೋ ಒಂದು ತಿಳಿಯದಾಗಿದೆ. ಕನಿಷ್ಠ ಹಗಲು 3 ಗಂಟೆ ಮತ್ತು ರಾತ್ರಿ 3 ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿದರೆ ಸಾಕಾಗುತ್ತದೆ. ಅಧಿಕಾರಿಗಳು ಅದನ್ನು ಕೊಡಲು ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಲೋಡ್‌ಶೆಡ್ಡಿಂಗ್ ಕಾರಣ ನೀಡಿ ವಿದ್ಯುತ್ ಕಡಿತಗೊಳಿಸುತ್ತಾರೆ. ಇದರಿಂದ ತೋಟಗಳಿಗೆ ನೀರು ಹಾಯಿಸುವುದೇ ಕಷ್ಟವಾಗುತ್ತಿದೆ. ಬರದಿಂದ ಬೇಸತ್ತಿರುವ ರೈತರಿಗೆ ವಿದ್ಯುತ್ ನೀಡದೆ ಅಧಿಕಾರಿಗಳು ಬರೆಎಳೆಯಲು ಮುಂದಾಗಿರುವುದು ಖಂಡನೀಯ. ಅಡಿಕೆ ಮತ್ತು ತೆಂಗಿನ ತೋಟಗಳು ಒಣಗಿ ಹೋದಲ್ಲಿ ಅಧಿಕಾರಿಗಳೇ ಅದರ ನಷ್ಟ ಬರಿಸಬೇಕಾಗುತ್ತದೆ. ನಿಯಮಾನುಸಾರ ವಿದ್ಯುತ್ ನೀಡದಿದ್ದರೆ ಕಚೇರಿಗೆ ಬೀಗಜಡಿದು ಅಧಿಕಾರಿಗಳನ್ನು ಕೂಡಿಹಾಕಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ರೈತರ ಸಮಸ್ಯೆ ಇಲಾಖೆಯ ಗಮನದಲ್ಲಿ ಇದೆ. ಬೇಸಿಗೆ ಆಗಿರುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತಿದೆ. ಮೇಲಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಡಬ ಬೆಸ್ಕಾಂ ಕಚೇರಿಯ ನವೀನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.