ADVERTISEMENT

ಬಗರ್‌ಹುಕುಂ ಸಾಗುವಳಿದಾರರ ಪ್ರತಿಭಟನೆ

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 16:45 IST
Last Updated 2 ಜುಲೈ 2020, 16:45 IST
ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬಗರ್‌ಹುಕುಂ ಸಾಗುವಳಿದಾರ ರೈತರು ಪ್ರತಿಭಟಿಸಿದರು
ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬಗರ್‌ಹುಕುಂ ಸಾಗುವಳಿದಾರ ರೈತರು ಪ್ರತಿಭಟಿಸಿದರು   

ತುಮಕೂರು: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಆಗುತ್ತಿರುವ ಕಿರುಕುಳ, ಕೃಷಿ ಚಟುವಟಿಕೆಗೆ ಅಡ್ಡಿ ತಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ಕೆಂಪದಾಳಹಳ್ಳಿ, ಚಿಕ್ಕಸೀಬಿ ಅಕ್ಕಪಕ್ಕದ ಗ್ರಾಮದ ನೂರಾರು ರೈತರು ತಲೆತಲಾಂತರದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಪಹಣಿಯಲ್ಲಿ ಸರ್ಕಾರಿ ಗೋಮಾಳ ಎಂದು ನಮೂದಾಗಿದೆ. ಹಲವು ರೈತರ ಹೆಸರು ಪಹಣಿಯಲ್ಲಿ ನಮೂದಾಗಿವೆ. ಆದರೂ ಅವರ ಮೇಲೆ ದಾಳಿ ನಡೆಸುವುದನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಗುಬ್ಬಿ ತಾಲ್ಲೂಕು ಗೌರಿಪುರ, ಶಿರಾ ತಾಲ್ಲೂಕಿನ ದೊಡ್ಡಸೀಬಿ, ಜೋಗಿಹಳ್ಳಿ, ತುಮಕೂರು ತಾಲ್ಲೂಕಿನಲ್ಲಿ ಅಮಾಯಕ ರೈತರು, ಕೂಲಿಕಾರ್ಮಿಕರ ಮೇಲೆ ಅರಣ್ಯ ಇಲಾಖೆ ದರ್ಪ ಮೆರೆಯುತ್ತಿದೆ. ಗುಡಿಸಲು ನಿರ್ಮಿಸಿಕೊಂಡರೆ ಸುಡುವುದು, ಶೆಡ್‍ಗಳನ್ನು ನಾಶ ಮಾಡುವುದು, ಹೆಣ್ಣುಮಕ್ಕಳನ್ನು ಬಾಯಿಗೆ ಬಂದಂತೆ ಬೈಯುವುದನ್ನು ಮಾಡುತ್ತಿರುವುದು ಸರಿಯಲ್ಲ ಎಂದರು.

ADVERTISEMENT

ಸಹ ಸಂಚಾಲಕ ಬಿ.ಉಮೇಶ್, ‘ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ರೈತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದು ಇದನ್ನು ನಿಲ್ಲಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆದು ತೀರ್ಮಾನಿಸಿದ್ದರೂ ಇದಕ್ಕೂ ಅರಣ್ಯ ಇಲಾಖೆ ಕಿಮ್ಮತ್ತು ಕೊಡುತ್ತಿಲ್ಲ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ ತಂಟೆಗೆ ಬರದಂತೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ದೊಡ್ಡನಂಜಯ್ಯ, ಕೋದಂಡಪ್ಪ, ಕರಿಬಸವಯ್ಯ, ಆನಂದಕುಮಾರ್, ರಂಗಧಾಮಯ್ಯ, ಸಿ.ಎನ್.ಮಂಜುನಾಥ್, ಶಿವಕುಮಾರ್, ಶಿವಲಿಂಗಯ್ಯ, ನಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.